

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಒಂದು ಲೀಟರ್ ಹಾಲಿನ ಬೆಲೆ 210 ರೂ.(ಪಾಕ್ ಕರೆನ್ಸಿ)ಆಗಿದೆ. ಜೀವಂತ ಕೋಳಿ ಬೆಲೆಯಲ್ಲೂ 30ರಿಂದ 40 ರೂಪಾಯಿಯಷ್ಟು ಹೆಚ್ಚಳವಾಗಿ ಒಂದು ಕೆಜಿ ಬೆಲೆ 480-500 ರೂಪಾಯಿ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ತಿಂಗಳ ಆರಂಭದಲ್ಲಿ ಜೀವಂತ ಕೋಳಿ 390-440 ರೂ.ಗೆ ಸಿಗುತ್ತಿತ್ತು. ಜನವರಿ ಕೊನೆ ವಾರದಲ್ಲಿ ಅದು 380-420 ರೂ. ಆಗಿತ್ತು.
ಕೋಳಿ ಮಾಂಸದ ಬೆಲೆ ಒಂದು ಕೆಜಿಗೆ ಕೆಲವೇ ದಿನಗಳ ಹಿಂದೆ 620-650 ರೂ. ಇದ್ದದ್ದು ಈಗ 700-780 ರೂ.ಗೆ ಏರಿದೆ. ಬೋನ್ಲೆಸ್ ಚಿಕನ್ ಬೆಲೆ ಕೆಜಿಗೆ 1,100 ರೂಪಾಯಿಗೆ ತಲುಪಿದೆ.
ಬೇಕಾಬಿಟ್ಟಿ ಏರಿಕೆ: ಕರಾಚಿಯಲ್ಲಿ ಸುಮಾರು 1,000 ಅಂಗಡಿ ಮಾಲೀಕರು ಪರಿಸ್ಥಿತಿಯ ಲಾಭ ಪಡೆದು ಹಾಲಿನ ದರವನ್ನು ಬೇಕಾಬಿಟ್ಟಿಯಾಗಿ ಏರಿಸಿದ್ದಾರೆ ಎಂದು ಕರಾಚಿ ಚಿಲ್ಲರೆ ಹಾಲು ಮಾರಾಟಗಾರರ ಸಂಘ ಹೇಳಿದೆ. ಸುಮಾರು 4,000ದಷ್ಟು ರೀಟೆಲ್ ವರ್ತಕರು ದರ ಪರಿಷ್ಕರಣೆ ಮಾಡಿಲ್ಲ. ಹಿಂದೆ ನಿಗದಿಪಡಿಸಿದ್ದ 190 ರೂಪಾಯಿಗೇ ಮಾರುತ್ತಿದ್ದಾರೆ ಎಂದು ಸಂಘ ತಿಳಿಸಿದೆ. 2022 ಡಿಸೆಂಬರ್ 15ರಂದು, ಹಾಲಿಗೆ 10 ರೂ. ಏರಿಸಲಾಗಿದ್ದು ಪ್ರತಿ ಲೀ. ಹಾಲನ್ನು 180 ರೂಪಾಯಿಗೆ ಮಾರಬಹುದೆಂದು ಕರಾಚಿಯ ಆಯುಕ್ತರು ಅನುಮತಿ ನೀಡಿದ್ದರು. ಆದರೆ ಬಹುತೇಕ ಕ್ಷೀರ ವ್ಯಾಪಾರಿಗಳು ಅಧಿಕೃತ ಬೆಲೆಯನ್ನು ತಿರಸ್ಕರಿಸಿ 190 ರೂಪಾಯಿಗೆ ಮಾರುವುದನ್ನು ಮುಂದುವರಿಸಿದ್ದಾರೆ. ಆ ವೇಳೆ ಅಧಿಕೃತ ಸಗಟು ಮಾರಾಟ ದರವನ್ನು ಲೀ. ಒಂದರ 170 ರೂ. ನಿಗದಿ ಪಡಿಸಲಾಗಿತ್ತು.