

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜನಸ್ಪಂದನಾ ಕಾರ್ಯಕ್ರಮ ಜನರಿಗೆ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟು ಪರಿಹಾರ ಕಂಡುಕೊಳ್ಳಲು ಆಯೋಜಿಸುವ ಕಾರ್ಯಕ್ರಮವಾಗಿದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದರು.
ಧರ್ಮಸ್ಥಳ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮ ಪಂಚಾಯಿತಿಮಟ್ಟದ ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇತರ ಕಾಮಗಾರಿಗಳನ್ನು ಮಾಡಲು ಅನುದಾನದ ಕೊರತೆ ಕಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಕಾರಣದಿಂದಾಗಿ ಸರ್ಕಾರದಿಂದ ಯಾವುದೇ ರೀತಿಯ ಹಣ ಬರುತ್ತಿಲ್ಲ. ಇದರಿಂದ ನಾನು ಚಿಂತಾಜನಕ ಸ್ಥಿತಿಯಲ್ಲಿದ್ದೇನೆ. ಆದರೂ ನನ್ನ ಪರಿಧಿಯಲ್ಲಿ ಸಾಧ್ಯವಾದಷ್ಟು ಅನುದಾನ ತರುವ ಪ್ರಯತ್ನ ನಡೆಸುತ್ತಿದ್ದೇನೆ ಎಂದರು.
ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸರಿಯಾದ ಆರೈಕೆ ಮಾಡಲಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂತು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.
ತಹಸೀಲ್ದಾರ್ ಪೃಥ್ವಿ ಸಾನಿಕಾಂ, ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ್, ಧರ್ಮಸ್ಥಳ ಸಹಕಾರಿ ಸಂಘ ಅಧ್ಯಕ್ಷ ಪ್ರೀತಮ್ ಡಿ., ಗ್ರಾಪಂ ಸದಸ್ಯರು, ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಮಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪಾಯಕಾರಿ ಮರಗಳ ತೆರವು
ಸಭೆಯಲ್ಲಿ ಸ್ಥಳೀಯರು ಮುಳಿಕಾರು ರಸ್ತೆಯಲ್ಲಿ ಅಪಾಯಕಾರಿ ಮರಗಳಿದ್ದು, ತೆರವುಗೊಳಿಸುವಂತೆ, ಜಲಜೀವನ್ ಯೋಜನೆಯಡಿ ಅಲ್ಲಲ್ಲಿ ರಸ್ತೆಬದಿ ಅಗೆಯಲಾಗಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಬೊಳಿಯಾರಿಲ್ಲಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಮರಗಳನ್ನು ತೆಗೆದು ತೋಟ ಮಾಡುತ್ತಿದ್ದಾರೆ. ಅವರಿಗೆ ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ತನಿಖೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.
ಕಡತ ತಿರಸ್ಕಾರಗೊಳ್ಳುವುದೇ ಹೆಚ್ಚು!
ಅಕ್ರಮ ಸಕ್ರಮ ಹಾಗೂ 94ಸಿ ಬಗ್ಗೆ ದೂರುಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ಅಕ್ರಮ ಸಕ್ರಮ ಯೋಜನೆಯಲ್ಲಿ ಈಗ ಸರ್ಕಾರ ತಂದಿರುವ ಹೊಸ ಕಾನೂನಿಂದಾಗಿ ಪಾಸ್ ಆಗುವುದಕ್ಕಿಂತ ತಿರಸ್ಕಾರಗೊಳ್ಳುವ ಕಡತಗಳೇ ಹೆಚ್ಚಾಗಿವೆ. ಈ ಬಗ್ಗೆ ಕರಾವಳಿಯ ಹಾಗೂ ಮಲೆನಾಡಿನ ಶಾಸಕರು ಒಟ್ಟಾಗಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇವೆ ಎಂದರು. 94ಸಿಯಲ್ಲಿರುವ ಕಡತಗಳನ್ನು ಕೂಡಲೇ ವಿಲೇ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಅನುದಾನ ತರಲು ಪ್ರಯತ್ನ
ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿ ಬಗ್ಗೆ ಜನರು ಶಾಸಕರ ಗಮನ ಸೆಳೆದರು. ಈ ಬಗ್ಗೆ ಉತ್ತರಿಸಿದ ಶಾಸಕರು ಅನುದಾನದ ಕೊರತೆಯಿಂದಾಗಿ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಅನುದಾನ ತರುವ ಪ್ರಯತ್ನ ನಡೆಸುತ್ತೇನೆ ಎಂದರು.
ನೂತನ ಬಸ್ ಸಂಚಾರಕ್ಕೆ ಚಾಲನೆ
ಧರ್ಮಸ್ಥಳದಿಂದ ಮೂರು ನೂತನ ಬಸ್ ರೂಟ್ಗಳಿಗೆ ಮಂಗಳವಾರ ಚಾಲನೆ ನೀಡುವುದಾಗಿ ಶಾಸಕರು ತಿಳಿಸಿದರು. ಧರ್ಮಸ್ಥಳ- ಸೌತಡ್ಕ, ಧರ್ಮಸ್ಥಳ- ನೆಲ್ಯಾಡಿ ಹಾಗೂ ಧರ್ಮಸ್ಥಳದಿಂದ ಉಜಿರೆ ಬಂದಾರು ಮಾರ್ಗವಾಗಿ ಪುತ್ತೂರಿಗೆ ನೂತನ ಬಸ್ಗಳು ಸಂಚಾರ ನಡೆಸಲಿವೆ ಎಂದರು.