

ಮಂಗಳೂರು : ಪ್ರತಿಯೊಬ್ಬ ರೋಗಿಯಲ್ಲಿಯೂ ಸಂತೃಪ್ತಿ ಮೂಡಿಸಿ ಆತನ ಬಾಳನ್ನು ನೆಮ್ಮದಿಗೊಳಿಸುವುದು ವೈದ್ಯರ ದೊಡ್ಡ ಆಸ್ತಿಯಾಗಿದೆ ಎಂದು ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಹೇಳಿದರು.
ಜಿಲ್ಲಾ ಆಯುಷ್ ಆಸ್ಪತ್ರೆ ಆವರಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರಿಗೆ ವಿಶೇಷ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಲೇಡಿಗೋಶನ್ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಮಾತನಾಡಿ, ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರು ಪ್ರಮುಖ ಆಧಾರ ಸ್ತಂಭವಾಗಿದ್ದು ಅವರ ನಿಸ್ವಾರ್ಥ, ಅನುಭವಿ ಹಾಗೂ ಮಾನವೀಯ ಸೇವೆಗಳು ಸಮಾಜಕ್ಕೆ ಸದಾ ಮಾದರಿಯಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್ ಇಕ್ಬಾಲ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಡಾ. ಪ್ರದೀಪ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ. ಎ ಖಾದರ್ ಶಾ, ಡಾ. ಮುರಳೀಧರ್, ಡಾ. ಝಾಹಿದ್ ಉಪಸ್ಥಿತರಿದ್ದರು. ನಿವೃತ್ತ ಆಯುಷ್ ಅಧಿಕಾರಿ ಡಾ. ದೇವದಾಸ್
ಪ್ರಾಸ್ತಾವಿಕವಾಗಿ ಮಾತನಾಡಿದರು.