ದೆಹಲಿ ಮೆಟ್ರೋಗೆ ಮತ್ತೊಂದು ಕಳಂಕ: ಮಹಿಳಾ ಪ್ರಯಾಣಿಕರ ಎದುರಲ್ಲೇ ಯುವಕನ ಅನುಚಿತ ವರ್ತನೆ

Delhi metro
Published on

ನವದೆಹಲಿ: ದೆಹಲಿ ಮೆಟ್ರೋ ರೈಲು ಇತ್ತೀಚೆಗೆ ಅಸಭ್ಯ ವರ್ತನೆಗಳ ತಾಣವಾಗುವ ಮೂಲಕ ಅಪಖ್ಯಾತಿಗೆ ಒಳಗಾಗುತ್ತಿದೆ. ಈ ಹಿಂದೆ ಯುವತಿಯೊಬ್ಬಳು ಅರೆಬರೆ ಮೈ ಕಾಣುವ ಅಶ್ಲೀಲ ಉಡುಗೆ ಧರಿಸಿ, ಪ್ರಯಾಣ ಮಾಡುವ ಮೂಲಕ ಸುದ್ದಿಯಾಗಿದ್ದಳು. ಇದಾದ ಬಳಿಕ ಜೋಡಿಯೊಂದು ರೈಲಿನ ಒಳಗೆ ಪ್ರಣಯದಾಟ ಆಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಯುವಕನೊಬ್ಬ ರೈಲಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ದೆಹಲಿ ಮೆಟ್ರೋಗಿರುವ ಕಳಂಕಕ್ಕೆ ಮತ್ತಷ್ಟು ಬಳಿದಿದ್ದಾನೆ.

ಯುವಕನ ಅಶ್ಲೀಲ ವರ್ತನೆಯ ವಿಡಿಯೋವನ್ನು ಪ್ರಯಾಣಿಕರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಜನರ ನಡುವೆಯೇ ಮೈಮರೆತು ಅಶ್ಲೀಲ ವರ್ತನೆಯಲ್ಲಿ ತೊಡಗಿರುವ ಯುವಕನ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಯುವಕನ ಪಕ್ಕದಲ್ಲಿ ಕುಳಿತಿರುವವರು ಆತನ ದುರ್ವರ್ತನೆ ಕಂಡ ಕೂಡಲೇ ಎದ್ದು ದೂರ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಚಾರ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್​ ಗಮನಕ್ಕೆ ಬಂದಿದ್ದು, ಯುವಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಆತನನ್ನು ಹುಡುಕಿ ಬಂಧಿಸುವಂತೆ ದೆಹಲಿ ಪೊಲೀಸರನ್ನು ಕೇಳಿದ್ದಾರೆ.

ವಿಡಿಯೋ ವೈರಲ್ ಆದ ನಂತರ, ದೆಹಲಿ ಮೆಟ್ರೋ ಇಲಾಖೆಯು ಧ್ವನಿ ಟಿಪ್ಪಣಿಯನ್ನು ಹೊರಡಿಸಿದೆ. ಮೆಟ್ರೋ ಒಳಗೆ ಸರಿಯಾಗಿ ನಡೆದುಕೊಳ್ಳುವಂತೆ ಪ್ರಯಾಣಿಕರನ್ನು ಆಗ್ರಹಿಸಿದೆ. ಇಂತಹ ಘಟನೆಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಸಹಾಯವಾಣಿ ಸಂಖ್ಯೆಗಳನ್ನು ಪ್ರಚಾರ ಮಾಡಲು DMRC ನಿರ್ಧರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net