ಕಾನೂನುಬಾಹಿರ ಯೋಜನೆಗೆ ಬೆಂಬಲ ಇಲ್ಲ : ಶಾಸಕ ಉಮಾನಾಥ ಕೋಟ್ಯಾನ್ ಸ್ಪಷ್ಟನೆ : ಗಣಿಗಾರಿಕೆ ವಿರುದ್ಧ ನಿಡ್ಡೋಡಿಯಲ್ಲಿ ಜನಾಕ್ರೋಶ

New Project (44)
Published on

ಮೂಡುಬಿದಿರೆ: ಗಣಿಗಾರಿಕೆ ನಡೆಸುವ ಮಂದಿ ನನಗೆ ದುಡ್ಡು ಕೊಟ್ಟಿದ್ದಾರೆ ಎಂದು ಎಲುಬಿಲ್ಲದ ನಾಲಿಗೆಯಿಂದ ಕೆಲವರು ಹೇಳುತ್ತಿದ್ದಾರೆ. ಕಾನೂನುಬಾಹಿರ ಯೋಜನೆಗೆ ನಮ್ಮ ಬೆಂಬಲ ಇಲ್ಲ. ನನಗೆ ಅವರ ಮೇಲೆ ಯಾವುದೇ ದಯ, ದಾಕ್ಷಿಣ್ಯ, ಮುಲಾಜಿಲ್ಲ. ಊರಿನವರು ಒಗ್ಗಟ್ಟಾಗಿ ವಿರೋಧಿಸಿ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಹೋರಾಟದಲ್ಲಿ ನಾವೂ ಭಾಗಿಗಳಾಗುತ್ತೇವೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಸೋಮವಾರ ನಿಡ್ಡೋಡಿ ಪೇಟೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಸೀ ಫುಡ್ ಪಾರ್ಕ್ ಮಾಡಲು ಯೋಚನೆ ಮಾಡಿದಾಗ ನನಗೆ ಅಂದು ವಿರೋಧ ಮಾಡಿದ ಜನರು ಮೈನ್ಸ್ ಕಂಪನಿಗೆ ಇಂದು ಜಾಗ ಮಾರಿದ್ದಾರೆ. ಈ ಭಾಗದ ಜನರಿಂದಾಗಿಯೇ ಇಲ್ಲಿ ಮೈನ್ಸ್ ವಹಿವಾಟು ನಡಿಯುತ್ತಿದೆ. ಊರಿನವರು ಒಗ್ಗಟ್ಟಾದರೆ ಮಾತ್ರ ಇದನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದರು.

ಕಲ್ಲಮುಂಡ್ಕೂರು ಗ್ರಾ.ಪಂ.ನ ನಿಡ್ಡೋಡಿಯ ಕೊಲತ್ತಾರು ಪದವು ಬಳಿ, ಕೆಂಪುಕಲ್ಲು ಗಣಿಗಾರಿಕೆಯ ಉಪಖನಿಜ ಸಾಗಾಟ ಮತ್ತು ತೆಗೆಯುವಿಕೆಯಿಂದ ಆಗುತ್ತಿರುವ ತೊಂದರೆಗಳ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದ.ಕ. ಜಿ.ಪಂ ಮಾಜಿ ಸದಸ್ಯ ಜನಾರ್ದನ ಗೌಡ ಮಾತನಾಡಿ, ತೆಂಕ ಮಿಜಾರು ಗ್ರಾಪಂ ವ್ಯಾಪ್ತಿಯಿಂದ ಹೊರಡುವ 12-20 ಚಕ್ರಗಳ ಭಾರಿ ವಾಹನಗಳು ಕಲ್ಲಮುಂಡ್ಕೂರು ಗ್ರಾ.ಪಂ. ವ್ಯಾಪ್ತಿಯ ರಸ್ತೆಯ ಮೂಲಕ ಬಳಿಕ ಮೂಡುಬಿದಿರೆ ಪುರಸಭೆಯಾಗಿ ಆಂಧ್ರ ಪ್ರದೇಶದತ್ತ ಹಾದುಹೋಗುವುದರಿಂದ ಇಡೀ ಪರಿಸರದಲ್ಲಿ ಅನಾರೋಗ್ಯಕರ ಪರಿಸ್ಥಿತಿ ಉಂಟಾಗಿದೆ. ರಸ್ತೆಗಳು ನಿರ್ನಾಮವಾಗುತ್ತಿವೆ. ಜನರು ಜೀವಭಯ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲು, ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಶಾಲಿನಿ, ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ ನಿಡ್ಡೋಡಿ, ಮಾಜಿ ಸದಸ್ಯ ಸತೀಶ್ ಅಮೀನ್, ದಿವ್ಯೇಶ್, ಶಾಂತಿ ಪ್ರಸಾದ್ ಹೆಗ್ಡೆ, ಕರುಣಾಕರ, ಭಾಸ್ಕರ ದೇವಸ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net