

ಚೆನ್ನೈ: ರಾಡಾರ್ ಇಮೇಜಿಂಗ್ ಉಪಗ್ರಹ ಇಒಎಸ್-01 ಸೇರಿ 10 ಉಪಗ್ರಹಗಳನ್ನು ಇಂದು ಉಡಾವಣೆ ಮಾಡುವುದಕ್ಕೆ ಇಸ್ರೋ ಸಜ್ಜಾಗಿದೆ. ಈಗಾಗಲೇ ಇದಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಶ್ರೀಹರಿ ಕೋಟಾದ ಮೊದಲನೇ ಲಾಂಚ್ ಪ್ಯಾಡ್ನಿಂದ ಅಪರಾಹ್ನ 3.02 ಗಂಟೆಗೆ ಉಡಾವಣೆಯಾಗಲಿದೆ.
ಇಒಎಸ್-01 ಉಪಗ್ರಹ ಈ ಮೊದಲು ರಿಯಾಸ್ಯಾಟ್-2ಬಿಆರ್2 ಆಗಿತ್ತು. ಅದರಲ್ಲಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಇದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲೂ ಫೋಟೋ ತೆಗೆಯುವ ಸಾಮರ್ಥ್ಯಹೊಂದಿದೆ. ಹಗಲು ಮತ್ತು ರಾತ್ರಿ ನಿಗಾ ಇರಿಸುವ ದೃಷ್ಟಿಯಿಂದ ಈ ಉಪಗ್ರಹ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಎಲ್ಲ ರೀತಿಯ ನಾಗರಿಕ ಚಟುವಟಿಕೆಗಳೂ ಇದರಲ್ಲಿ ದಾಖಲಾಗಲಿವೆ. ಭದ್ರತೆ, ಸುರಕ್ಷತೆಯ ದೃಷ್ಟಯಿಂದ ನಿಗಾ ಇರಿಸುವುದಕ್ಕೆ ಇದನ್ನು ಉಪಯೋಗಿಸಲಾಗುತ್ತಿದೆ.
ಇಂದಿನ ಉಡಾವಣೆಯೊಂದಿಗೆ ಇಸ್ರೋ ಒಟ್ಟು 328 ವಿದೇಶಿ ಉಪಗ್ರಹ ಉಡಾವಣೆ ಮಾಡಿದ ದಾಖಲೆ ನಿರ್ಮಿಸಲಿದೆ. ಭಾರತದ ಉಪಗ್ರಹದ ಹೊರತಾಗಿ, ಲಿಥುವಾನಿಯಾ (1-ಟೆಕ್ನಾಲಜಿ ಡೆಮಾನ್ಸ್ಟ್ರೇಟರ್), ಲಕ್ಸಂಬರ್ಗ್ ( ಕ್ಲಿಯೋಸ್ ಸ್ಪೇಸ್ನಿಂದ 4 ಮಾರ್ಟೈಮ್ ಅಪ್ಲಿಕೇಶನ್ ಸ್ಯಾಟಲೈಟ್ಸ್ ), ಅಮೆರಿಕದ 4 ಲೆಮುರ್ ಮಲ್ಟಿ ಮಿಷನ್ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಸೇರಿ 9 ಇತರೆ ಉಪಗ್ರಹಗಳು ಪಿಎಸ್ಎಲ್ವಿ-ಸಿ49 ಮೂಲಕ ಉಡಾವಣೆಯಾಗಲಿವೆ. (ಏಜೆನ್ಸೀಸ್)