ಅಬ್ಬರ, ಅದ್ಭುತ, ರೋಚಕ... ಐಪಿಎಲ್​ಗೆ ಟಕ್ಕರ್ ಕೊಡಲು ಹೋಗಿ ಮುಗ್ಗರಿಸಿದ ಪಿಎಸ್​ಎಲ್​! IPL vs PSL

ವಿಜಯವಾಣಿ (38)
Published on

IPL vs PSL: ಮಾ.22ರಿಂದ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ ಜಾಗತಿಕ ಮಟ್ಟದಲ್ಲಿ ವ್ಯಾಪಕ ವೀಕ್ಷಣೆಯನ್ನು ಪಡೆಯುತ್ತಿದೆ. ಈ ವಿಷಯದಲ್ಲಿ ಅನುಮಾನವೇ ಇಲ್ಲ. ಬಿಸಿಸಿಐ ಐಪಿಎಲ್​ ಲೀಗ್ ಶುರುಮಾಡಿದ ಒಂದೇ ತಿಂಗಳೊಳಗೆ ತಮ್ಮ ದೇಶದಲ್ಲಿ ಪಿಎಸ್​ಎಲ್​ಗೆ ಚಾಲನೆ ನೀಡಿರುವ ಪಾಕಿಸ್ತಾನ, ಎಂದಿನಂತೆ ತನ್ನ ನರಿ ಬುದ್ಧಿಯನ್ನು ತೋರಿದೆ. ವೀಕ್ಷಕರ ಸಂಖ್ಯೆ ಹಾಗೂ ಕ್ರಿಕೆಟ್​ ಪ್ರೇಮಿಗಳ ಸಂಖ್ಯೆ ಐಪಿಎಲ್​ಗೆ ಹೆಚ್ಚು. ಜಾಗತಿಕವಾಗಿ ಇಂಡಿಯನ್ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿ, ಕ್ರಿಕೆಟಿಗರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದನ್ನು ಸಹಿಸಿಕೊಳ್ಳದ ಪಾಕ್​ ಮಾಜಿ ಆಟಗಾರರು, ಪಿಎಸ್​ಎಲ್​ ಮುಂದೆ ಐಪಿಎಲ್​ ಏನೇನೂ ಅಲ್ಲ ಎಂದು ಹೇಳಿಕೆ ನೀಡಿದ್ದರು. ಆದ್ರೆ, ಈಗ ಅದೆಲ್ಲವೂ ತಲೆಕೆಳಗಾಗಿದೆ.

2025ರ ಐಪಿಎಲ್​ಗೆ ಪ್ರತಿಸ್ಪರ್ಧಿಯಾಗಿ ಅಖಾಡಕ್ಕಿಳಿದ ಪಾಕಿಸ್ತಾನ ಲೀಗ್​, ಶುರುವಾಗಿ ಇಂದಿಗೆ ಎರಡು ವಾರಗಳು ಕಳೆದರೂ ಅದ್ಭುತ, ರೋಚಕ, ಅಮೋಘ ಪಂದ್ಯಗಳನ್ನು ವೀಕ್ಷಿಸುವ ಭಾಗ್ಯ ಅಲ್ಲಿನ ಕ್ರಿಕೆಟ್​ ಪ್ರಿಯರಿಗೆ ಸಿಕ್ಕಿಲ್ಲ. ಇದಕ್ಕೆ ಇತ್ತೀಚೆಗೆ ನಡೆದಿರುವ ಪಂದ್ಯಗಳ ವಿವರವೇ ಸಾಕ್ಷಿ. ಸತತ ಗಮನಾರ್ಹ ಪ್ರದರ್ಶನಗಳು ಕಂಡುಬಂದಿಲ್ಲ ಎಂಬುದೇ ಬೇಸರ. ಆಟಗಾರರ ಪ್ರತಿಭೆ ಇಲ್ಲದೆ ಲೀಗ್ ಮುಂದುವರಿಯುತ್ತದೆ. ಏಪ್ರಿಲ್ 11ರಂದು ಪ್ರಾರಂಭಗೊಂಡ ಪಿಎಸ್​ಎಲ್​, ಏಪ್ರಿಲ್ 20 ರವರೆಗೆ ಹತ್ತು ಪಂದ್ಯಗಳನ್ನು ಆಡಿಸಿದೆ.

ಆಡಿರುವ 10 ಪಂದ್ಯಗಳಲ್ಲಿ ಕೇವಲ ಒಂದೇ ಒಂದು ಪಂದ್ಯ ಮಾತ್ರ ರೋಚಕತೆಗೆ ಸಾಕ್ಷಿಯಾಗಿದೆ. ಏಪ್ರಿಲ್ 12ರಂದು ನಡೆದ ಮೂರನೇ ಪಂದ್ಯದಲ್ಲಿ, ಕರಾಚಿ ಕಿಂಗ್ಸ್ ತಂಡ ಮುಲ್ತಾನ್ ಸುಲ್ತಾನ್ಸ್ ನೀಡಿದ 235 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ, ರೋಚಕ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ, ಎರಡೂ ತಂಡಗಳ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಜೇಮ್ಸ್ ವಿನ್ಸ್ ಶತಕ ಗಳಿಸಿ ಮಿಂಚಿದರು. ಇದುವರೆಗೆ ನಡೆದ ಪಂದ್ಯಗಳಲ್ಲಿ ಈ ಪಂದ್ಯ ಮಾತ್ರ ಹೇಳಿಕೊಳ್ಳುವಂತದ್ದು.

ಇಲ್ಲಿಯವರೆಗೆ ಆಡಿರುವ 10 ಪಂದ್ಯಗಳಲ್ಲಿ ಕೇವಲ 14 ಅರ್ಧಶತಕಗಳು ಮಾತ್ರ ದಾಖಲಾಗಿವೆ. ಬೌಲರ್‌ಗಳು ಕೂಡ ಅಮೋಘ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಸ್ಲಾಮಾಬಾದ್ ಪರ ಆಡುವ ವೆಸ್ಟ್ ಇಂಡೀಸ್ ಬೌಲರ್ ಜೇಸನ್ ಹೋಲ್ಡರ್ 11 ವಿಕೆಟ್​ ಪಡೆಯುವ ಮೂಲಕ ಯಶಸ್ವಿ ಬೌಲರ್ ಆಗಿ ಕಾಣಿಸಿದರೆ, ಕರಾಚಿ ಕಿಂಗ್ಸ್ ಪರ ಹಸನ್ ಅಲಿ (10) ಅದ್ಭುತ ಪ್ರದರ್ಶನ ನೀಡುವತ್ತ ಶ್ರಮಿಸುತ್ತಿದ್ದಾರೆ. ಪಿಎಸ್​ಎಲ್​ ಮುಂದೆ ಐಪಿಎಲ್​ ಏನೇನೂ ಅಲ್ಲ ಎಂದಿದ್ದ ಪಾಕ್​ ಮಾಜಿ ಕ್ರಿಕೆಟಿಗರಿಗೆ ಇದೀಗ ಮತ್ತೊಮ್ಮೆ ಭಾರೀ ಮುಖಭಂಗವೇ ಉಂಟಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net