

ಬೆಳಗಾವಿ: ಸ್ಥಳೀಯ ಖಡೇಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಮನೋಹರ ಗಣಾಚಾರಿ ಅವರು ಶನಿವಾರ ನಸುಕಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವರಿಗೆ 58 ವರ್ಷ ವಯಸ್ಸಾಗಿತ್ತು. ಸೇವಾ ನಿವೃತ್ತಿಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದವು. ಅವರು ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಲೆಂದು ನಗರದ ವಡಗಾವಿ ಯಳ್ಳೂರು ರಸ್ತೆಯ ಮನೆಯಿಂದ ಹೊರಟು ಬರುತ್ತಿದ್ದಾಗ ಕೆಎಲ್ಇ ಆಸ್ಪತ್ರೆಯ ಸಮೀಪ ಕೆಲವು ಬೀದಿ ನಾಯಿಗಳು ರಸ್ತೆಗಡ್ಡ ಬಂದಿದ್ದವು. ಅವುಗಳನ್ನು ತಪ್ಪಿಸಲು ಪ್ರಯತ್ನಿಸಿದಾಗ ದ್ವಿಚಕ್ರವಾಹನ ಸ್ಕಿಡ್ ಆಗಿ ಬಿದ್ದುಬಿಟ್ಟಿದ್ದರು. ಗಂಭೀರಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಇಂದೇ ನಡೆಯಲಿದೆ ಎಂದು ಆಪ್ತರು ತಿಳಿಸಿದ್ದಾರೆ.