

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶಾಸಕರಾಗಿ ಹಾಗೂ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದ ವಿನಯಕುಮಾರ್ ಸೊರಕೆ ಸ್ವಪಕ್ಷದ ಸರ್ಕಾರದಲ್ಲಿನ ಆಡಳಿತ ದೋಷಗಳನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸುವುದನ್ನು ಬಿಟ್ಟು ಸತ್ಯದರ್ಶನ ಎಂಬ ಹೆಸರಿನಲ್ಲಿ ಪಂಚಾಯಿತಿಗೆ ತೆರಳಿ ಪ್ರತಿಭಟಿಸುವುದು ಹಾಸ್ಯಾಸ್ಪದ ಸಂಗತಿಯಾಗಿದೆಯಲ್ಲದೆ, ಅವರ ಸಹಾಯಕತೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಟೀಕಿಸಿದರು.
ಕಾಪುವಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂಬ ಹೇಳಿಕೆಯನ್ನು ಸೊರಕೆಯವರೇ ನೀಡಿದ್ದಾರೆ. ಆದರೆ ಸುರೇಶ್ ಶೆಟ್ಟಿಯವರು ಶಾಸಕರಾಗಿ ಜನಪರ ಕೆಲಸ ಮಾಡುತ್ತಿದ್ದಾರೆ. ಸೊರಕೆಯವರು ತಾವು ಸಚಿವರಾಗಿ ಹಾಗೂ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ಸಮಸ್ಯೆ ಬಗಹರಿಸದೇ ಇದ್ದದ್ದು ಹಾಸ್ಯಾಸ್ಪದ ಸಂಗತಿ ಎಂದರು.
ಪಕ್ಷದ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಜಿಲ್ಲಾ ವಕ್ತಾರೆ ಗೀತಾಂಜಲಿ ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಕ್ಷೇತ್ರ ವಕ್ತಾರ ನವೀನ್ ಎಸ್.ಕೆ., ಪ್ರಧಾನ ಕಾರ್ಯದರ್ಶಿಗಳಾದ ಶರಣ್ಕುಮಾರ್ ಮಟ್ಟು, ಗೋಪಾಲಕೃಷ್ಣ ರಾವ್, ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಡ್ವೆ, ಕೋಟೆ ಶಕ್ತಿಕೇಂದ್ರ ಅಧ್ಯಕ್ಷ ಹರ್ಷಿತ್ ಸನಿಲ್ ಉಪಸ್ಥಿತರಿದ್ದರು.