

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಮಾನವ ಮತ್ತು ಹಾವುಗಳ ಸಂಘರ್ಷ ಇತ್ತೀಚೆಗೆ ಬಹಳಷ್ಟು ಹೆಚ್ಚಾಗಿದೆ. ಮಾನವರು ಹಾವುಗಳಿಗೆ ತೊಂದರೆ ಉಂಟು ಮಾಡುವ ಬದಲು ಎಚ್ಚರಿಕೆಯಿಂದ ಇರಬೇಕು. ಹಾವುಗಳ ಕುರಿತು ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಿ ಜಾಗೃತಿ ಮೂಡಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳದ ಉಪಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಹೇಳಿದರು.
ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕುದುರೆಮುಖ ವನ್ಯ ಜೀವಿ ವಿಭಾಗ ಕಾರ್ಕಳ, ಸೋಮೇಶ್ವರ ವನ್ಯಜೀವಿ ವಲಯ ವತಿಯಿಂದ ಆಯೋಜಿಸಿದ್ದ ವಿಭಾಗ ಮಟ್ಟದ ಅಂತರಾಷ್ಟ್ರೀಯ ಹಾವುಗಳ ದಿನಾಚರಣೆ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಮಾತನಾಡಿ, ಅರಣ್ಯ ನಾಶದಿಂದಾಗಿ ಪ್ರಾಣಿ ಸಂಕುಲಕ್ಕೆ ಸಂಕಷ್ಟ ಎದುರಾಗಿದೆ. ಹಾವುಗಳು ಪ್ರಕೃತಿಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಕೃತಿ ಇದ್ದರೆ ಮಾತ್ರ ಮನುಷ್ಯ ಬದುಕಲು ಸಾಧ್ಯ ಎಂದರು.
ಸಿದ್ದಾಪುರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ಜಿ.ಡಿ. ಮಾತನಾಡಿ, ಪ್ರಕೃತಿ ಪ್ರತಿಯೊಂದು ಜೀವಿಯಲ್ಲೂ ಆಹಾರ ಸಮತೋಲನವನ್ನು ಕಾಪಾಡುತ್ತದೆ. ಆಹಾರ ಸರಪಳಿ ಉತ್ತಮವಾಗಿರಬೇಕಾದರೆ ಪ್ರಕೃತಿಯಲ್ಲಿ ಹಾವುಗಳ ಸಂತತಿ ಉಳಿಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದ ಅಜಯ ಗಿರಿ, ಅಂಕೋಲಾ ವಲಯದ ಉಪವಲಯ ಅರಣ್ಯಾಧಿಕಾರಿ ಸಿ.ಆರ್.ನಾಯಕ್ ಇದ್ದರು.
ಕಾರ್ಕಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಎನ್., ಸೋಮೇಶ್ವರ ವನ್ಯಜೀವಿ ಉಪವಿಭಾಗ ಹೆಬ್ರಿಯ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜಿ., ಎಸ್.ಆರ್.ಸಮೂಹ ಶಿಕ್ಷಣ ಕಾರ್ಯದರ್ಶಿ ಸಪ್ನಾ ಎನ್.ಶೆಟ್ಟಿ, ಪ್ರಾಂಶುಪಾಲ ಪ್ರಶಾಂತ್, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು. ಜೀವಶಾಸ್ತ್ರ ಉಪನ್ಯಾಸಕಿ ಆಶಾ ನಿರೂಪಿಸಿ, ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಶುಭಲಕ್ಷ್ಮೀ ವಂದಿಸಿದರು.