

ಕೋಟ: ಕಾಳಿಂಗ ನಾವಡರು ಯಕ್ಷಗಾನ ರಂಗದ ಪ್ರಾತಃಸ್ಮರಣೀಯ ಭಾಗವತರು. ರಂಗವನ್ನು ಸಮರ್ಥವಾಗಿ ಮುನ್ನಡೆಸುವುದರ ಜತೆಗೆ ಸಹಕಲಾವಿದರನ್ನು ತಿದ್ದುವ ಮೂಲಕ ಇತರರಿಗೆ ಆದರ್ಶರಾದವರು. ಯಕ್ಷಗಾನ ರಂಗದ ಸಾಧನೆಗಾಗಿ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಬೇಕು ಎಂದು ಸಾಹಿತಿ ಡಾ.ಶ್ರೀಕಾಂತ ಸಿದ್ದಾಪುರ ಅಭಿಪ್ರಾಯಪಟ್ಟರು.
ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರದಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನ ರಂಗದ ಮೇರು ಭಾಗವತ ಕಾಳಿಂಗ ನಾವಡರ ಸವಿನೆನಪಿಗಾಗಿ ‘ನೆನಪಿನಂಗಳದಲ್ಲಿ ನಾವಡರು’ ಮತ್ತು ಕಳೆದ ವರ್ಷ ನಿಧನರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟನೆ ನರವೇರಿಸಿ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಇಂತಹ ಮಹಾ ಸಾಧಕರ ಸಂಸ್ಮರಣೆ ಅರ್ಥಪೂರ್ಣ. ಕಲಾರಾಧಕರಿಗೆ ಸದಾ ಪ್ರೋತ್ಸಾಹ ನೀಡಿದಾಗ ನಮ್ಮ ಸಂಸ್ಕೃತಿಗೆ ಮನ್ನಣೆ ನೀಡಿದಂತಾಗುತ್ತದೆ ಎಂದರು.
ಪ್ರಸಂಗಕರ್ತ ಡಾ.ಶಿವಕುಮಾರ್ ಅಳಗೋಡು, ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ ಮುಂತಾದವರು ಉಪಸ್ಥಿತರಿದ್ದರು. ಪ್ರಸಂಗಕರ್ತ ಚಾರ ಪ್ರದೀಪ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರೂಪಿಸಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ವಂದಿಸಿದರು. ಹಿರಿಯ ಕಲಾವಿದ ರಾಮಕೃಷ್ಣ ಮಂದರ್ತಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ‘ಉಲೂಪಿ ನಂದನ’ ಯಕ್ಷಗಾನ ತಾಳಮದ್ದಳೆ ನಡೆಯಿತು.