ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆ ಖಂಡನೀಯ: ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಆಕ್ರೋಶ

New Project (4)
Published on

ಮುಳ್ಳೇರಿಯ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲಾಗುತ್ತಿರುವ ಮಲತಾಯಿ ಧೋರಣೆ ಖಂಡನೀಯ. ಇಲ್ಲಿಯ ಕನ್ನಡಿಗರಿಗೆ ನೀಡಲ್ಪಟ್ಟಿರುವ ವಿಶೇಷಾಧಿಕಾರಗಳು ಯಾವುದೇ ಸವಲತ್ತು ಅಲ್ಲ. ಅದು ಸಂವಿಧಾನ ಬದ್ಧ ಹಕ್ಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿಮಟ್ಟದಲ್ಲಿ ಕನ್ನಡ ಶಿಕ್ಷಣ ನಾಮಾವಶೇಷಗೊಳಿಸುವ ಹುನ್ನಾರ ಮತ್ತು ಅನರ್ಹರನ್ನು ಶಿಕ್ಷಕಿಯರಾಗಿ ನೇಮಿಸಲು ರ‌್ಯಾಂಕ್ ಲಿಸ್ಟ್ ತಯಾರಿಸಿದ ದೇಲಂಪಾಡಿ ಗ್ರಾಪಂ ಆಡಳಿತ ಸಮಿತಿ ವಿರುದ್ಧ, ಅಡೂರು ಕೋರಿಕಂಡ ಅಂಗನವಾಡಿಯ ಕನ್ನಡ ಸಂರಕ್ಷಣಾ ಹೋರಾಟ ಸಮಿತಿ ಶುಕ್ರವಾರ ನಡೆಸಿದ ಪ್ರತಿಭಟನೆ ಸಂದರ್ಭ ಅವರು ಮಾತನಾಡಿದರು.

ದೇಲಂಪಾಡಿ ಗ್ರಾ.ಪಂ. ಅಧ್ಯಕ್ಷರು ಕನ್ನಡ ಅರಿಯದ ಶಿಕ್ಷಕಿಯನ್ನು ನೇಮಕಮಾಡಿರುವುದು ತಪ್ಪು. ಇದರಿಂದ ಅಂಗನವಾಡಿಯ ಬಹುಸಂಖ್ಯಾತ ಕನ್ನಡ-ತುಳು ಭಾಷಿಕ ಪುಟಾಣಿಗಳಿಗೆ ತೊಂದರೆಯಾಗುತ್ತದೆ. ಕನ್ನಡ ವಿರೋಧಿ ಕ್ರಮಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಬೇಕಾದೀತು ಎಂದರು.

ಕೋರಿಕಂಡ ಅಂಗನವಾಡಿ ಕನ್ನಡ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಅಶೋಕ ಸರಳಾಯ ಅಂಬತ್ತಿಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ, ವಕೀಲ ಮುರಳೀಧರ ಬಳ್ಳುಕ್ಕುರಾಯ ಮಾತನಾಡಿದರು.

ಕರ್ನಾಟಕ ಸಮಿತಿಯ ಜಯನಾರಾಯಣ ತಾಯನ್ನೂರು ಮಾತನಾಡಿದರು. ಸಾಹಿತಿ, ಸಂಘಟಕ ಸುಂದರ ಬಾರಡ್ಕ, ಗ್ರಾ.ಪಂ. ಸದಸ್ಯೆ ಪ್ರಮೀಳಾ ಸಿ.ನಾಯ್ಕ, ಗಂಗಾಧರ ಅಡೂರು ಮೊದಲಾದವರು ನೇತೃತ್ವ ವಹಿಸಿದ್ದರು.

ಸಂರಕ್ಷಣಾ ಸಮಿತಿ ಕಾರ್ಯದರ್ಶಿ ನಯನಾ ಅಡೂರು ಸ್ವಾಗತಿಸಿದರು. ಗಂಗಾಧರ ವಂದಿಸಿದರು. ಅಡೂರು ಶ್ರೀಮಹಾಲಿಂಗೇಶ್ವರ ಕ್ಷೇತ್ರ ಪರಿಸರದಿಂದ ಗ್ರಾ.ಪಂ. ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net