

ವಿಟ್ಲ: ಊರಿನ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಕಲಿತ ಸಂಸ್ಥೆ, ಊರಿಗೆ ಕೊಡುಗೆಯನ್ನು ನೀಡಬೇಕೆಂದು ಅಳಿಕೆಯಲ್ಲಿ ಕಲಿತ ವಿದ್ಯಾರ್ಥಿಗಳು ಮುಂದಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟಿನ ಕಾರ್ಯದರ್ಶಿ ಚಂದ್ರಶೇಖರ ಭಟ್ ಹೇಳಿದರು.
ಪಡಿಬಾಗಿಲು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಅಳಿಕೆ ವಿದ್ಯಾಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಹಂತದಲ್ಲಿ ಸಿಗುತ್ತಿರುವ ಎಲ್ಲರ ಬೆಂಬಲದಿಂದ ಸಂಸ್ಥೆ ಪ್ರಗತಿಯತ್ತ ಸಾಗುತ್ತಿದೆ. ಹೃದಯವಂತಿಕೆ ಹಾಗೂ ಬುದ್ಧಿವಂತಿಕೆಯನ್ನು ಹೊಂದಿರುವ ಶಿಕ್ಷಕರು ಸಂಸ್ಥೆಯಲ್ಲಿರುವ ಕಾರಣ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ನಡೆಸಲು ಸಾಧ್ಯವಾಗಿದೆ ಎಂದರು.
ಪ್ರಗತಿಪರ ಕೃಷಿಕ ನವೀನ್ ಚಂದ್ರ ಸಿ. ಕೆ. ಕೃಷಿ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಕಾರ್ಯಕರ್ತರಾದ ಬಾಬು ಬೆಳ್ಚಾಡ, ಮೋನು ಯಾನೆ ಸುಂದರ ಬೆಳ್ಚಾಡ, ಅಚ್ಚುತ ಭಟ್ ಅವರನ್ನು ಸನ್ಮಾನಿಸಲಾಯಿತು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ನರೇಂದ್ರ ರೆಡ್ಡಿ, ಪದವಿ ಪೂರ್ವ ಕಾಲೇಜು ವಿಭಾಗದ ವಾರ್ಡನ್ ಯಾದವ ಎನ್., ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರಘು ಟಿ. ವೈ., ವಿದ್ಯಾ ಕೇಂದ್ರದ ಪ್ರಾಂಶುಪಾಲ ಶಿವಕುಮಾರ್ ಭಟ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಈಶ್ವರ ನಾಯ್ಕ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳಾದ ಚೇತನ್ ಸಿ. ಆರ್. ಸ್ವಾಗತಿಸಿದರು. ಡಾ.ವಿಕ್ರಮ ಶೆಟ್ಟಿ ದಾನಿಗಳ ಪರಿಚಯ ಮಾಡಿದರು. ನಾಗೇಶ್ ವಂದಿಸಿದರು. ಬಿ.ಯು.ಮಂಜುನಾಥ, ಡಾ.ಕಿಶನ್ ಭಾಗವತ್ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಕಾರ್ಯಕ್ರಮ:
ಹಳೇ ವಿದ್ಯಾರ್ಥಿಗಳಿಗೆ ಶನಿವಾರ ನಾಯಕತ್ವ ತರಬೇತಿ ಹಾಗೂ ಫುಟ್‌ಬಾಲ್ ಹಾಗೂ ಈಜು ಸ್ಪರ್ಧೆ ನಡೆಯಿತು. ತರಬೇತುದಾರ ಪ್ರೊ.ಮಹೇಂದ್ರ ಮಿಶ್ರಾ ನಾಯಕತ್ವ ತರಬೇತಿ ನೀಡಿದರು. ಆಟೋಟಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.