

ಮಂಡ್ಯ: ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಕಾವೇರಿಯನ್ನೇ ನಂಬಿ ಬದುಕುತ್ತಿರುವ ಮಂಡ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದೆ.
ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಪಂಪ್ ಹೌಸ್ಗೆ ವಿವಿಧ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಿ ಬೆಂಗಳೂರಿಗೆ ನೀರು ಸರಬರಾಜು ನಿಲ್ಲಿಸುವಂತೆ ಆಗ್ರಹಿಸಿದರು.
ಬೆಂಗಳೂರಿಗೆ ಸಂಪೂರ್ಣವಾಗಿ ಕಾವೇರಿ ನೀರು ನಿಲ್ಲಿಸಿ, ರೈತರ ಬೆಳೆಗೆ ನೀರು ಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಕಾವೇರಿ ಹೋರಾಟದಲ್ಲಿ ಬೆಂಗಳೂರಿಗರು ಭಾಗಿಯಾಗದಕ್ಕೆ ಆಕ್ರೋಶ ಹೊರಹಾಕಿದರು.
ತಮಿಳುನಾಡಿಗೆ ನೀರು ಹರಿಸುತ್ತಿದ್ರೂ ಬೆಂಗಳೂರಿಗರು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನೀರು ಪೂರೈಕೆ ಸ್ಥಗಿತ ಮಾಡಿದ್ರೆ ಬೆಂಗಳೂರು ಮಂದಿ ಬುದ್ಧಿ ಕಲಿಯುತ್ತಾರೆಂದು ಆಕ್ರೋಶ ಹೊರಹಾಕಿದ ಸಂಘಟನೆಗಳು ಪಂಪ್ಹೌಸ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪಂಪ್ ಹೌಸ್ಗೆ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. 2 ಡಿಎಆರ್ ತುಕಡಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಿಂದ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕಕ್ಕೆ ನಿನ್ನೆ (ಸೆ.21) ಆದೇಶಿಸಿದೆ. ಮುಂದಿನ 15 ದಿನಗಳವರೆಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶಿಸಿದೆ.