

ತುಮಕೂರು: ಯಾವ ಬ್ರಾಹ್ಮಣರು 1 ರೂಪಾಯಿ ಕೊಟ್ಟು ಹೂವು, ಉದಿನಕಡ್ಡಿ ತರೋದಿಲ್ಲ ಎಂದು ಲೇವಡಿ ಮಾಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಹಿರಂಗ ಕ್ಷಮೆಯಾಚಿಸದಿದ್ದರೆ ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘವು ಪ್ರತಿಭಟನೆ ನಡೆಸಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟಾಚಲಯ್ಯ, ಗೌರವಾಧ್ಯಕ್ಷ ಜಾನಕಿರಾಮ್ ನೇತೃತ್ವದಲ್ಲಿ ಪ್ರತಿಭಟಿಸಿದ ಅರ್ಚಕರು, ಸಚಿವ ರಾಜಣ್ಣ ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬ್ರಾಹ್ಮಣರ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡಿ ಛೇಡಿಸಿದ್ದು ತತ್‌ಕ್ಷಣ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯಪಾಲರಿಗೆ ಮನವಿ: ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬಹಿರಂಗ ಕ್ಷಮೆಕೋರಬೇಕು, ಇಲ್ಲದಿದ್ದಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ವತಿಯಿಂದ ಎಡಿಸಿ ಶಿವಾನಂದ ಬಿ. ಕರಾಳೆ ಮೂಲಕ ಮನವಿ ಸಲ್ಲಿಸಲಾಯಿತು.
ಗೌರವಾಧ್ಯಕ್ಷ ಡಾ.ಜಾನಕಿರಾಮ್, ಪ್ರಧಾನ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸ್ ಮೂರ್ತಿ, ಕಾರ್ಯಾಧ್ಯಕ್ಷ ಎಂ.ವಿ.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಕೆ.ಟಿ.ಗೋಪಿನಾಥ್, ಖಜಾಂಚಿ ಆರ್.ರಘು, ಸಂಘಟನಾ ಕಾರ್ಯದರ್ಶಿ ಎನ್.ಪ್ರಕಾಶ್, ಟಿ.ಆರ್. ವಸಂತಕುಮಾರ್, ಮೋಹನ್ ಕುಮಾರ್ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.