

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ದಕ್ಷಿಣ ಕನ್ನಡ ಜಿಲ್ಲಾ ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲೀಕರ ಒಕ್ಕೂಟದ ಸಮಾಲೋಚನಾ ಸಭೆ ಶುಕ್ರವಾರ ಬಿ.ಸಿ.ರೋಡ್ನ ಖಾಸಗಿ ಸಭಾಂಗಣದಲ್ಲಿ ನಡೆದಿದ್ದು ಮುಂದಿನ ಹೋರಾಟದ ಬಗ್ಗೆ ಸಮಾಲೋಚನೆ ನಡೆದ ಬಳಿಕ ಜುಲೈ 3ರಂದು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿತು.
ಜೂನ್ 30ರಂದು ನಡೆಯಲಿರುವ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಹೊಂದಲಾಗಿದೆ. ಆದರೂ ನಿರೀಕ್ಷಿತ ಫಲಿತಾಂಶ ಸಿಗದಿದ್ದಲ್ಲಿ ಮುಂದಿನ ಹೋರಾಟ ರಾಜಕೀಯರಹಿತವಾಗಿ ಒಗ್ಗಟ್ಟಿನಿಂದ ನಡೆಯಬೇಕು. ಕನಿಷ್ಠ ಹತ್ತು ಸಾವಿರ ಮಂದಿ ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ತೀರ್ಮಾನಿಸಲಾಯಿತು.
ಸಂಘದ ಜಿಲ್ಲಾ ಕೋಶಾಧಿಕಾರಿ ರಾಮ ಮುಗರೋಡಿ, ಮುಡಿಪು ವಲಯಾಧ್ಯಕ್ಷ ವಿಶ್ವನಾಥ್ ರೈ, ಕೈಕಂಬ ವಲಯಾಧ್ಯಕ್ಷ ಧೀರಜ್ ಅಮೀನ್, ಮೂಡುಬಿದಿರೆ ವಲಯಾಧ್ಯಕ್ಷ ಪ್ರವೀಣ್ ಡಿಸೋಜ, ಲಾರಿ ಮಾಲೀಕರ ಸಂಘದ ಮೂಡುಬಿದಿರೆ ವಲಯಾಧ್ಯಕ್ಷ ರವಿಶಂಕರ್ ಮಿಜಾರ್, ವಿಟ್ಲ ವಲಯಾಧ್ಯಕ್ಷ ಸುಧೀರ್ ಕೋಟ್ಯಾನ್, ಬಂಟ್ವಾಳ ವಲಯಾಧ್ಯಕ್ಷ ಮೋಹನ್ ಶೆಟ್ಟಿ, ಎಕ್ಕಾರು ವಲಯಾಧ್ಯಕ್ಷ ಗಣೇಶ್ ಶೆಟ್ಟಿ, ಪುತ್ತೂರು ವಲಯಾಧ್ಯಕ್ಷ ಹೇಮಚಂದ್ರ, ಸುಳ್ಯ ವಲಯಾಧ್ಯಕ್ಷ ಪ್ರಕಾಶ್ ಅಡ್ಕಾರ್, ಕಿನ್ನಿಗೋಳಿ ವಲಯಾಧ್ಯಕ್ಷ ಗೋಪಾಲ ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರ್ ಕಾರ್ಯಕ್ರಮ ನಿರ್ವಹಿಸಿದರು.
ಕೇರಳದವರಿಂದ ಸಹಕಾರ ಇಲ್ಲ
ಕೇರಳದಲ್ಲಿ ಕೆಂಪು ಕಲ್ಲು ಟನ್ಗೆ 42 ರೂ. ರಾಯಲ್ಟಿ ಇದ್ದಾಗ ಏಳು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಫಲವಾಗಿ 32 ರೂ.ಗೆ ಇಳಿದಿದ್ದು ಜಿಪಿಎಸ್ ವ್ಯವಸ್ಥೆ ರದ್ದುಪಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ 97 ರೂ. ಇದ್ದ ರಾಯಲ್ಟಿ ಏಕಾಏಕಿ 254 ರೂ.ಗೆ ಏರಿಸಲಾಗಿದೆ. ಜಿಪಿಎಸ್ ವ್ಯವಸ್ಥೆಯೂ ಇರುವುದರಿಂದ ಈ ಬಾರಿ ಅನಿವಾರ್ಯವಾದರೆ ದೊಡ್ಡಮಟ್ಟದ ಪ್ರತಿಭಟನೆ ನಡೆಸಿ ಕೆಂಪು ಕಲ್ಲು ವಲಯದಲ್ಲಿ ಎಷ್ಟು ಮಂದಿ ಇದ್ದಾರೆ ಎನ್ನುವುದು ತೋರ್ಪಡಿಸಬೇಕು. ಕೇರಳದಲ್ಲಿ ನಡೆದ ಪ್ರತಿಭಟನೆಗೆ ಜಿಲ್ಲಾ ಸಂಘ ಸಹಕಾರ ನೀಡಿದ್ದರೂ ಈಗ ನಮ್ಮ ಸಮಸ್ಯೆಗೆ ಅವರ ಸಹಕಾರ ಏನೂ ಇಲ್ಲ ಎಂದು ಕೆಂಪುಕಲ್ಲು ಪಾಯ ಹಾಗೂ ಲಾರಿ ಮಾಲೀಕರ ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.