ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ನವಸ್ಪರ್ಶ : ಅಮೃತ್‌ಭಾರತ್‌ನಡಿ ಸೌಕರ್ಯ : ಅತ್ಯಾಧುನಿಕ ಎಕ್ಸಿಕ್ಯೂಟಿವ್ ಲಾಂಜ್

New Project (13)
Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಕೇಂದ್ರದ ಅಮೃತ್‌ಭಾರತ್ ಯೋಜನೆಯನ್ವಯ ಕಾಸರಗೋಡು ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳ್ಳುತ್ತಿದ್ದು, ವಿವಿಧ ರೈಲ್ವೆ ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವ ಕೇಂದ್ರದ ಕನಸು ಸಾಕಾರದತ್ತ ಸಾಗುತ್ತಿದೆ.

ಕಾಸರಗೋಡು ರೈಲ್ವೆ ನಿಲ್ದಾಣ ಮುಂಭಾಗದ ಕಟ್ಟಡ ಅಭಿವೃದ್ಧಿಗೊಳಿಸುವುದರ ಜತೆಗೆ ಸೌಂದರ್ಯವೃದ್ಧಿ ಕಾಮಗಾರಿ, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಮೇಲ್ಛಾವಣಿ ವಿಸ್ತರಣೆ, ರೈಲ್ವೆ ನಿಲ್ದಾಣದ ಎದುರಿಗಿರುವ ಬಸ್ ಪ್ರಯಾಣಿಕರ ತಂಗುದಾಣದ ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಹಿಂದೆ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಒಂದಷ್ಟು ಜಾಗ ಮಾತ್ರ ವಾಹನ ಪಾರ್ಕಿಂಗ್‌ಗೆ ಸೀಮಿತವಾಗಿದ್ದರೆ, ಉಳಿದ ವಾಹನಗಳನ್ನು ರಸ್ತೆಬದಿ ಎಲ್ಲೆಂದರಲ್ಲಿ ನಿಲ್ಲಿಸಬೇಕಾದ ಅನಿವಾರ್ಯತೆಯಿತ್ತು. ಪ್ರಸಕ್ತ ಒಂದನೇ ಟ್ರ್ಯಾಕ್ ಎದುರುಗಡೆಯಿರುವ ವಿಶಾಲ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ.

ಹವಾನಿಯಂತ್ರಿತ ವಿಶ್ರಾಂತಿಗೃಹ

ಪ್ರಯಾಣಿಕರಿಗೆ ಹೆಚ್ಚು ಸೌಕರ್ಯಪ್ರದವಾದ ರೀತಿಯಲ್ಲಿ ನಿರ್ಮಿಸಿರುವ ವಿಶ್ರಾಂತಿಗೃಹ ಗಮನಸೆಳೆಯುತ್ತಿದೆ. ಬೇಸಿಗೆಯಲ್ಲಿ ಏರುತ್ತಿರುವ ತಾಪಮಾನದಿಂದ ಬೆವರಿ ಬಳಲುವ ಪ್ರಯಾಣಿಕರಿಗೆ ಇನ್ನು ಮುಂದೆ ತಂಪಾದ ಕೊಠಡಿಯಲ್ಲಿ ಕಾಲ ಕಳೆಯಬಹುದು. ಕಾಸರಗೋಡು ರೈಲ್ವೆ ನಿಲ್ದಾಣದ ಒಂದನೇ ಫ್ಲ್ಯಾಟ್‌ಫಾರ್ಮ್‌ನ ಹೊರಾಂಗಣದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಟಿಕೆಟ್ ಕೌಂಟರನ್ನು ಪ್ರಯಾಣಿಕರಿಗೆ ವಿಶ್ರಾಂತಿಗಾಗಿ ಎ.ಸಿ ಎಕ್ಸಿಕ್ಯೂಟಿವ್ ಲಾಂಜ್ ಆಗಿ ನವೀಕರಿಸಲಾಗಿದೆ. ರೈಲ್ವೆ ನಿಲ್ದಾಣಕ್ಕೆ ಮುಂಚಿತವಾಗಿ ತಲುಪುವವರು ಅಥವಾ ರೈಲು ವಿಳಂಬವಾಗಿ ಆಗಮಿಸುತ್ತಿದ್ದಲ್ಲಿ ವಿಶ್ರಾಂತಿ ಕೊಠಡಿಯನ್ನು ಬಳಸಿಕೊಳ್ಳಬಹುದು. ಒಬ್ಬ ಪ್ರಯಾಣಿಕನಿಗೆ 30ರೂ. ಶುಲ್ಕ ವಿಧಿಸಲಾಗುತ್ತಿದ್ದು, ಇದರೊಳಗೆ ಸುಸಜ್ಜಿತ ಆಸನ, ಉಚಿತ ವೈಫೈ, ಲ್ಯಾಪ್‌ಟಾಪ್, ಮೊಬೈಲ್ ಚಾರ್ಜರ್ ಕೂಡ ಲಭ್ಯವಿದೆ. ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಲಾಂಜ್‌ನಲ್ಲಿ ಆದ್ಯತೆ ಕಲ್ಪಿಸಲಾಗುತ್ತಿದ್ದು, ಇತರರಿಗೂ ಬಳಸಿಕೊಳ್ಳಬಹುದು. ಇನ್ನು ಸ್ವಚ್ಛತೆಗೆ ಆದ್ಯತೆ ಕಲ್ಪಿಸಿ ಉಪಾಹಾರಗೃಹವನ್ನೂ ಲಾಂಜ್‌ನೊಳಗೆ ತೆರೆಯಲಾಗಿದೆ. ಸ್ಟೇಶನ್ ಮಾಸ್ಟರ್ ಕೊಠಡಿ ಸನಿಹ ಸುಸಜ್ಜಿತ ವಿಐಪಿ ಕೊಠಡಿಯನ್ನೂ ನಿರ್ಮಿಸಲಾಗಿದ್ದು, ಇದರೊಂದಿಗೆ ಕ್ಲಾಕ್ ರೂಮ್ ಕೂಡಾ ಕಾರ್ಯಪ್ರವೃತ್ತವಾಗಿದೆ.

ಶೋಚನೀಯಾವಸ್ಥೆಯಲ್ಲಿದೆ ರಸ್ತೆ

ಇನ್ನು ರೈಲಲ್ಲಿ ಆಗಮಿಸುವ ಪ್ರಯಾಣಿಕರಿಗಾಗಿ ಕಾರ್ಯಾಚರಿಸುತ್ತಿರುವ ಪ್ರೀಪೈಡ್ ಆಟೋ ಕೇಂದ್ರದಲ್ಲಿ ಪ್ರಯಾಣಿಕರು ಮಳೆ, ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯತೆಯಿದೆ. ಪ್ರೀಪೈಡ್ ಆಟೋ ಸೇವೆಯನ್ನು ದಿನದ 24 ತಾಸು ಜಾರಿಯಲ್ಲಿರಿಸುವಂತೆಯೂ ಆಗ್ರಹ ಕೇಳಿಬರುತ್ತಿದೆ. ಶೌಚಗೃಹಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗಿದೆ. ಇನ್ನು ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣಕ್ಕೆ ಬರುವ ರಸ್ತೆ ಶೋಚನೀಯಾವಸ್ಥೆಯಲ್ಲಿದೆ. ಬ್ಯಾಂಕ್ ರಸ್ತೆಯಲ್ಲಿ ರಸ್ತೆ ಶಿಥಿಲಾವಸ್ಥೆಯಲ್ಲಿದ್ದು, ತುರ್ತಾಗಿ ರೈಲ್ವೆ ನಿಲ್ದಾಣ ತಲುಪಬೇಕಾದರೆ ಹರಸಾಹಸ ಪಡಬೇಕಾಗುತ್ತದೆ. ಕರಂದಕ್ಕಾಡಿನಿಂದ ರೈಲ್ವೆ ನಿಲ್ದಾಣ ವರೆಗಿನ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಿ, ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸುವಂತೆ ಆಗ್ರಹ ಹೆಚ್ಚಾಗಿದೆ.

ಅಮೃತಭಾರತ್ ಯೋಜನೆಯನ್ವಯ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿಕಾರ್ಯ ನಡೆಯುತ್ತಿದೆ. ಶೌಚಗೃಹಗಳ ಸಂಖ್ಯೆ ಹೆಚ್ಚಳ, ಮೇಲ್ಛಾವಣಿ ಹೊಂದಿದ ಪ್ರೀಪೈಡ್ ಆಟೋ ಕೇಂದ್ರದ ನಿರ್ಮಾಣ ಸೇರಿದಂತೆ ಕೆಲವೊಂದು ತುರ್ತು ಕಾಮಗಾರಿಗಳು ನಡೆಯಬೇಕಾಗಿದ್ದು, ಈ ಬಗ್ಗೆ ಇಲಾಖೆ ಗಮನಸೆಳೆಯಲಾಗುವುದು. ಪ್ರಯಾಣಿಕರ ಹಿತದೃಷ್ಟಿಯಿಂದ ಪ್ಯಾಸೆಂಜರ್ ರೈಲುಗಳ ಸಂಖ್ಯೆ ಹೆಚ್ಚಿಸುವುದು, ನಿಲ್ದಾಣದಲ್ಲಿ ಜನರೇಟರ್ ಅಳವಡಿಕೆ, ಎರಡನೇ ಲಿಫ್ಟ್ ಕಾಂಗರಿ ತ್ವರಿಗೊಳಿಸುವಂತೆಯೂ ಇಲಾಖೆಗೆ ಮನವಿ ಮಾಡಲಾಗುವುದು. ಆರ್.ಪ್ರಶಾಂತ್ ಕಾಸರಗೋಡು ರೈಲ್ವೆ ಪ್ರಯಾಣಿಕರ ಅಸೋಸಿಯೇಶನ್ ಅಧ್ಯಕ್ಷ https://www.vijayavani.net/football-tournament-for-spc-students https://www.vijayavani.net/steel-bridge-bearing-capacity-check

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net