ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಡಬಾಗಿಲು ರಸ್ತೆ ಕಾಮಗಾರಿ : ಕಾಂಕ್ರಿಟೀಕರಣಕ್ಕೆ ಸ್ಥಳೀಯರ ವಿರೋಧ : ರಸ್ತೆಯಲ್ಲಿ ಮಲಗಿ ಪ್ರತಿಭಟನೆ

7
Published on

ಪುತ್ತೂರು ಗ್ರಾಮಾಂತರ: ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಿಳಿದ ಹಾಗೂ ಬಳಿಕದ ಬೆಳವಣಿಗೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರರ ಸೂಚನೆಯಂತೆ ಪ್ರತಿಭಟನಾ ನಿರತ ಸ್ಥಳೀಯರನ್ನು ಪೊಲೀಸರು ವಶಕ್ಕೆ ಪಡೆದು ಬಿಗು ಪೊಲೀಸ್ ಬಂದೋಬಸ್ತ್‌ನಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ ಟನೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ.

ಕಾಡಬಾಗಿಲು ರಸ್ತೆ ಕಾಮಗಾರಿ ಆರಂಭಿಸಲು ಮಂಗಳವಾರ ಸ್ಥಳಕ್ಕೆ ಜೆಸಿಬಿ ಬಂದಿತ್ತು. ಈ ವೇಳೆ ಕೆಲವು ಮನೆಯ ಮಹಿಳೆಯರು, ಮಕ್ಕಳ ಸಹಿತ ಸ್ಥಳೀಯರು, ಇದು ನಮ್ಮ ಖಾಸಗಿ ರಸ್ತೆ ಎಂಬ ವಾದದೊಂದಿಗೆ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಅಧಿಕಾರಿಗಳು ಮತ್ತು ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರೂ ಒಪ್ಪದ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಧರಣಿ ಮುಂದುವರಿಸಿದರು. ಪ್ರತಿಭಟನಾ ನಿರತರು ಸ್ಥಳದಿಂದ ಕದಲದಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್, ಧರಣಿ ಕುಳಿತವರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ಜೆಸಿಬಿ ಕೆಲಸ ಆರಂಭಿಸುತ್ತಿದ್ದಂತೆಯೇ ತೀವ್ರ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು ಜೆಸಿಬಿ ಎದುರಲ್ಲಿ ರಸ್ತೆಯಲ್ಲಿ ಮಲಗಿ ವಿರೋಧ ವ್ಯಕ್ತಪಡಿಸಿದರು. ಮಹಿಳೆಯರು ಮಕ್ಕಳನ್ನು ಹಿಡಿದುಕೊಂಡೇ ರಸ್ತೆಯಲ್ಲಿ ಮಲಗಿದರು. ಪೊಲೀಸರು ಅವರನ್ನು ಅಲ್ಲಿಂದ ಎತ್ತಿಕೊಂಡು ಹೋಗಲು ಮುಂದಾದಾಗ ವಾಗ್ವಾದ, ನೂಕಾಟ, ತಳ್ಳಾಟವೂ ನಡೆಯಿತು. ಕೊನೆಗೆ ಪೊಲೀಸರು ಕೆಲವರನ್ನು ಬಲವಂತವಾಗಿ ರಸ್ತೆಯಿಂದ ಎತ್ತಿಕೊಂಡು ಹೋಗಿ ಪೊಲೀಸ್ ವಾಹನದಲ್ಲಿ ಕುಳ್ಳಿರಿಸಿಕೊಂಡು ಸಂಪ್ಯ ಠಾಣೆಗೆ ಕರೆದೊಯ್ದರು. ಬಳಿಕ ಸಂಪ್ಯ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್.ಐ. ಸುಷ್ಮಾ ಜಿ.ಭಂಡಾರಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ರಸ್ತೆ ಕಾಮಗಾರಿ ಆರಂಭಿಸಲಾಯಿತು.

ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಮುಂಡೂರು ಪಿಡಿಒ ಮನ್ಮಥ ಅಜಿರಂಗಳ, ಕಾರ್ಯದರ್ಶಿ ಸೂರಪ್ಪ, ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ, ಮುಂಡೂರು ಗ್ರಾ.ಪಂ. ಸದಸ್ಯ ಕಮಲೇಶ್ ಎಸ್.ವಿ. ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net