

ವಿಜಯವಾಣಿ ಸುದ್ದಿಜಾಲ ಬೈಂದೂರು
ಸಮಾಜದ ಏಳಿಗೆಯಲ್ಲಿ ಶಿಕ್ಷಣ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿದಾಗ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ಬೈಂದೂರು ಗಾಣಿಗ ಪ್ರತಿಷ್ಠಾನ ಅಧ್ಯಕ್ಷ ಕೊಲ್ಲೂರು ರಮೇಶ ಗಾಣಿಗ ಹೇಳಿದರು. ವತ್ತಿನೆಣೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಪ್ರತಿಷ್ಠಾನ ವತಿಯಿಂದ ಭಾನುವಾರ ಪ್ರತಿಭಾ ಪುರಸ್ಕಾರ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಪರಮೇಶ್ವರ ಗಾಣಿಗ ಉದ್ಘಾಟಿಸಿದರು. ಎರಡನೇ ಹಂತದ ಹೊಲಿಗೆ ತರಬೇತಿಯನ್ನು ಕುಂದಾಪುರ ತಾಲೂಕು ಗಾಣಿಗ ಸಂಘದ ಅಧ್ಯಕ್ಷ ಸತೀಶ್ ಗಾಣಿಗ ಉದ್ಘಾಟಿಸಿದರು. ಡಾ.ಸರಸ್ವತಿ ಬಾಲಕೃಷ್ಣ ಕಲಿಕಾ ಸಾಮಗ್ರಿ ವಿತರಿಸಿದರು. ಉದ್ಯಮಿ ಪಿ.ಎನ್. ಶ್ರೀಧರ, ಸಹಕಾರಿ ಸಂಘದ ನಿವೃತ್ತ ಸಿಇಒ ಗಣಪಯ್ಯ ಗಾಣಿಗ, ಪ್ರಗತಿಪರ ಕೃಷಿಕ ಹುಳುವಾಡಿ ರಾಜು ಗಾಣಿಗ, ನಿವೃತ್ತ ಬ್ಯಾಂಕ್ ಅಧಿಕಾರಿ ಸೀತಾರಾಮ ಗಾಣಿಗ, ಪ್ರತಿಭಾ ಪುರಸ್ಕಾರ ಸಮಿತಿಯ ಶಿವಾನಂದ ಗಾಣಿಗ, ಪ್ರೇಮಾ ಶೆಟ್ಟಿ ಉಪಸ್ಥಿತರಿದ್ದರು.
ಸತ್ಯನಾರಾಯಣ ಗಾಣಿಗ ಪ್ರಾರ್ಥಿಸಿದರು. ಪ್ರತಿಷ್ಠಾನ ಕೋಶಾಧಿಕಾರಿ ಆನಂದ ಗಾಣಿಗ ಪ್ರಸ್ತಾವಿಸಿದರು. ಹಿಲ್ಕೋಡು ನಾಗರಾಜ ಗಾಣಿಗ ಸ್ವಾಗತಿಸಿದರು. ಪ್ರತಿಷ್ಠಾನ ಕಾರ್ಯದರ್ಶಿ ಬಂಕೇಶ್ವರ ನಾಗರಾಜ ಗಾಣಿಗ ವಂದಿಸಿದರು.
ನಿವೃತ್ತ ಮುಖ್ಯಶಿಕ್ಷಕ ಪುಟ್ಟಯ್ಯ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 1ರಿಂದ 7ನೇ ತರಗತಿಯ 155 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು.