ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಪ್ರಸ್ತಾವನೆ

meet
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಪ್ರತಿಭಾ ಆರ್. ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಪದವಿಪೂರ್ವ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಕಾಪು ತಾಲೂಕಿನಲ್ಲಿ ಬಾಲಕ ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರ್ ಪ್ರತಿಭಾ ಆರ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಪು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಂದಾಯ, ಪೊಲೀಸ್ ಹಾಗೂ ಇತರ ಇಲಾಖೆಗಳಿಗೆ ಸಂಬಂಧಪಟ್ಟ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದರು.

ಉಡುಪಿ ಮತ್ತು ದ.ಕ. ಜಿಲ್ಲಾ ಕೇಂದ್ರಗಳಲ್ಲಿ ಪ.ಪೂ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಿದ್ದು, ಮಧ್ಯ ಭಾಗದಲ್ಲಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ಹೊರ ಜಿಲ್ಲೆಯ ಬಡ ಮಕ್ಕಳು ಅದರಲ್ಲೂ ಹೆಣ್ಮಕ್ಕಳು ವಿದ್ಯಾರ್ಥಿನಿಲಯಗಳಿಲ್ಲದೆ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ ಎಂಬ ವಾಸುದೇವ ಬೆಳ್ಳೆ ಅವರ ಮನವಿಗೆ ತಹಸೀಲ್ದಾರ್ ಪ್ರತಿಕ್ರಿಯಿಸಿದರು.

*ಅಸ್ಪಶ್ಯತೆ ಇನ್ನೂ ಜೀವಂತ: ಅವಿಭಜಿತ ಜಿಲ್ಲೆ ಶಾಲೆಗಳಲ್ಲಿ ಅಸ್ಪಶ್ಯತೆ ಜೀವಂತವಾಗಿದ್ದು, ಈ ಬಗ್ಗೆ ಮಕ್ಕಳು ಮತ್ತು ಪಾಲಕರು ಹೇಳಲು ಹಿಂಜರಿಯುತ್ತಾರೆ. ಪೊಲೀಸ್, ಸಮಾಜಕಲ್ಯಾಣ ಹಾಗೂ ಶಿಕ್ಷಣ ಇಲಾಖೆ ಸೇರಿ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಸರ್ಕಾರದಿಂದ ಲಭಿಸುವ ವಿದ್ಯಾರ್ಥಿವೇತನಗಳ ಬಗ್ಗೆ ಶಾಲೆಗಳಲ್ಲಿ ಮಾಹಿತಿ ನೀಡಲು ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿ ಓರ್ವ ಶಿಕ್ಷಕರನ್ನು ನೋಡೆಲ್ ಆಗಿ ನೇಮಿಸಲು ಶಿಕ್ಷಣಾಧಿಕಾರಿಗಳು ನಿರ್ದೇಶನ ನೀಡುವಂತೆ ಬೆಳ್ಳೆ ಅಹವಾಲು ಸಲ್ಲಿಸಿದರು. 15 ದಿನಗಳ ಹಿಂದೆ ಕಾಪು ಮತ್ತು ಉಡುಪಿ ತಾಲೂಕಿನ ಶಾಲೆಗಳ ಮುಖ್ಯಶಿಕ್ಷಕರ ಸಭೆ ಕರೆದು ಯಾವುದೇ ಮಕ್ಕಳು ವಿದ್ಯಾರ್ಥಿವೇತನ ಸಹಿತ ಯಾವುದೇ ಸೌಲಭ್ಯದಿಂದ ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಬಿಇಒ ಯಲ್ಲಮ್ಮ ಉತ್ತರಿಸಿದರು.

ಮೂಡುಬೆಳ್ಳೆ ಗ್ರಾಮದ ನೆಲ್ಲಿಕಟ್ಟೆಯಲ್ಲಿನ ಡಿಸಿ ಮನ್ನಾ ಭೂಮಿ ಗ್ರಾಪಂ ನೀಡಿರುವುದು ಸರಿಯಲ್ಲ, ಅದನ್ನು ಪಡೆದು ನಿವೇಶನ ರಹಿತ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ನೀಡುವಂತೆ, ತೋಕೊಳಿ ಸಮುದಾಯ ಭವನ ಮೂಲಸೌಕರ್ಯ ಜೋಡಣೆ ಮಾಡುವಂತೆ ರಾಘವ ಬೆಳ್ಳೆ ಒತ್ತಾಯಿಸಿದರು. ಬಡಾ ಗ್ರಾಮದಲ್ಲಿ ರುಧ್ರಭೂಮಿ ಇನ್ನೂ ನಿರ್ಮಾಣವಾಗದ ಬಗ್ಗೆ, ಡಿಸಿ ಮನ್ನಾ ಜಮೀನು ವಿವರ ನೀಡುವಂತೆ ವಿಠಲ್ ಆಗ್ರಹಿಸಿದರು.

ಇನ್ನಂಜೆ ಪಾಂಗಾಳಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಹಾಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ದಾಖಲೆ ನೀಡಿದರೂ ಶೈಕ್ಷಣಿಕ ಸಾಲ ಮಂಜೂರು ಮಾಡದೆ ರಾಷ್ಟ್ರೀಕೃತ ಬ್ಯಾಂಕ್‌ನವರು ಸತಾಯಿಸುತ್ತಿರುವ ಬಗ್ಗೆ ಗೀತಾ ಪಾಂಗಾಳ ಗಮನ ಸೆಳೆದರು. ಶಿರ್ವ ಗ್ರಾಪಂನಲ್ಲಿ ಶೇ.25ರ ನಿಧಿಯ ವಿದ್ಯಾರ್ಥಿವೇತನ ಮಂಜೂರಾದರೂ ತೆರಿಗೆ ಪಾವತಿ ಮಾಡದೆ ಅದನ್ನು ನೀಡದಿರುವ ಬಗ್ಗೆ ಚಂದ್ರಹಾಸ ದೂರಿದರು. ಈ ಬಗ್ಗೆ ಪಿಡಿಒ ಅವರಿಂದ ಸ್ಪಷ್ಟನೆ ಪಡೆದ ತಾಪಂ ಇಒ ಜೇಮ್ಸ್ ಡಿಸಿಲ್ವ, ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ತೆರಿಗೆ ಪಾವತಿಸಿ, ಫಲಾನುಭವಿಗಳಿಗೆ ವಿದ್ಯಾರ್ಥಿವೇತನ ನೀಡಿ ಎಂದು ಸಮಜಾಯಿಷಿ ನೀಡಿದರು.

ಕಾಪು ತಾಲೂಕು ಆಡಳಿತ ಸೌಧ ಮುಂಭಾಗ ಅಂಬೇಡ್ಕರ್ ಪುತ್ಥಳಿ ನಿರ್ಮಿಸುವಂತೆ ಕೇಶವ ಸಾಲ್ಯಾನ್ ಹೆಜಮಾಡಿ ಸಲ್ಲಿಸಿದ ಬೇಡಿಕೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಹಸೀಲ್ದಾರ್ ತಿಳಿಸಿದರು. ಪಡುಬಿದ್ರಿ ಕೆಪಿಎಸ್ ಶಾಲಾ ಆವರಣದಲ್ಲಿರುವ ಶಿಥಿಲ ಸರ್ಕಾರಿ ಕಟ್ಟಡ ಕೆಡಹುವಂತೆ ಕೃಷ್ಣ ಮನವಿ ಮಾಡಿದರು. ಅದನ್ನು ಪರಿಶೀಲಿಸಿ ಕ್ರಮವಹಿಸುವುದಾಗಿ ತಹಸೀಲ್ದಾರ್ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಕಾಪು ಠಾಣಾಧಿಕಾರಿ ತೇಜಸ್ವಿ, ಶೇಖರ ಹೆಜಮಾಡಿ ಉಪಸ್ಥಿತರಿದ್ದರು.

ಜಾಗ ಶೀಘ್ರ ಹಸ್ತಾಂತರ

ಪಂಬದ ಸಮುದಾಯಕ್ಕೆ ಸಮುದಾಯಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯವರು ಸಮಾಜಕಲ್ಯಾಣ ಇಲಾಖೆಯಡಿ ತೆಂಕ ಗ್ರಾಮದಲ್ಲಿ ಜಾಗ ಕಾಯ್ದಿರಿಸಿದ್ದರು. ಅದರ ಹಸ್ತಾಂತರಕ್ಕೆ ಶೀಘ್ರ ಕ್ರಮ ವಹಿಸುವಂತೆ ಆಗ್ರಹ ವ್ಯಕ್ತವಾಯಿತು. ಪಂಬದ ಸಮಾಜಕ್ಕೆ ಪಹಣಿ ಆಗಿದ್ದು, ಶೀಘ್ರ ಅದನ್ನು ಹಸ್ತಾಂತರಿಸಲು ಕ್ರಮ ವಹಿಸುವಂತೆ ತಹಸೀಲ್ದಾರ್ ಕಂದಾಯ ನಿರೀಕ್ಷಕರಿಗೆ ಸೂಚಿಸಿದರು.

ಅಂಬೇಡ್ಕರ್‌ಭವನ ದುರಸ್ತಿಗೆ ಅನುದಾನ

ಪಡುಬಿದ್ರಿಯಲ್ಲಿ 20 ಲಕ್ಷ ರೂ.ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು, ಅದರ ಮುಂಭಾಗದಲ್ಲಿನ ಹಳೇ ಭವನ ದುರಸ್ತಿಗೆ 10 ಲಕ್ಷ ರೂ. ಅನುದಾನಕ್ಕಾಗಿ 3 ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಾಪಂನಿಂದ 4.5 ಲಕ್ಷ ರೂ. ಹಾಗೂ ಪಡುಬಿದ್ರಿ ಗ್ರಾ.ಪಂ.ನಿಂದ 2 ಲಕ್ಷ ರೂ. ಅನುದಾನ ದೊರೆತಿದ್ದು, ಬಾಕಿ ಮೊತ್ತ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಬೇಕು. ಅದು ದುರಸ್ತಿಯಾಗದೆ ಹೊಸ ಭವನ ಉದ್ಘಾಟಿಸದಂತಾಗಿದೆ ಎಂದು ಕೃಷ್ಣ ಬಂಗೇರ ಅಲವತ್ತುಕೊಂಡರು. ಇಲಾಖೆಯಿಂದ ದುರಸ್ತಿಗೆ ಯಾವುದೇ ಅನುದಾನ ಲಭಿಸುವುದಿಲ್ಲ ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರೋಶನ್ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net