

ರಾಯ್ಪುರ: ಕೋಳಿ ಫಾರಂ ಶುರು ಮಾಡಲು ಲೋನ್ )Loan) ಕೊಡಿಸುವುದಾಗಿ ನಂಬಿಸಿ ಎಸ್ಬಿಐ ಮ್ಯಾನೇಜರ್ (Bank Manager) ಒಬ್ಬರು ರೈತನಿಂದ 39 ಸಾವಿರ ರೂ. ಮೌಲ್ಯದ ಚಿಕನ್ ತಿಂದು ಸಾಲ ಕೊಡಿಸದೆ ವಂಚನೆ ಎಸಗಿರುವ ಘಟನೆ ಛತ್ತೀಸ್ಗಢದ ಮಸ್ತೂರಿಯಲ್ಲಿ ನಡೆದಿದೆ.
ಮಸ್ತೂರಿ ಪಟ್ಟಣದ ರೈತ ರೂಪ್ಚಂದ್ ಮನಹರ್ ತನ್ನದೇ ಆದ ಸ್ವಂತ ಕೋಳಿ ಫಾರಂಅನ್ನು ಹೊಂದಿದ್ದಾರೆ. ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಎಸ್ಬಿಐನಲ್ಲಿ ಲೋನ್ಗೆ ಅಪ್ಲೈ ಮಾಡಿದ್ದಾರೆ. ಲೋನ್ ಅಪ್ರೂವಲ್ ಕೊಡುವುದಾಗಿ ಹೇಳಿದ ಬ್ರಾಂಚ್ ಮ್ಯನೇಜರ್ ತನಗೆ ಪ್ರತಿನಿತ್ಯ ಕೋಳಿ ಮಾಂಸ ತಂದುಕೊಡುವಂತೆ ರೈತನಿಗೆ ಸೂಚಿಸಿದ್ದಾನೆ.
ಬೇಗ ಸಾಲ ಸುಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತ ರೂಪ್ಚಂದ್ ಪ್ರತಿನಿತ್ಯ ಬಗೆಬಗೆಯ ಚಿಕನ್ ಖಾದ್ಯಗಳನ್ನು ತಯಾರಿಸಿಕೊಂಡು ಬಂದು ಮ್ಯಾನೇಜರ್ಗೆ ನೀಡಿದ್ದಾನೆ. ಇದಲ್ಲದೆ ಮ್ಯಾನೇಜರ್ ರೈತನಿಂದ ಮುಂಗಡವಾಗಿ 10% ಕಮಿಷನ್ ಪಡೆದಿದ್ದರು ಎಂದು ತಿಳಿದು ಬಂದಿದೆ. ದಿನಗಳು ಕಳೆದಂತೆ ಮ್ಯಾನೇಜರ್ ಲೋನ್ ಅಪ್ರೂವ್ ಮಾಡದೆ ಇರುವುದನ್ನು ಕಂಡ ರೈತ ಬೇರೆ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಆತ ಮೋಸ ಹೋಗಿರುವುದು ತಿಳಿದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ದೂರಿನಲ್ಲಿ 39 ಸಾವಿರ ರೂ. ಮೌಲ್ಯದ ಕೋಳಿ ಮಾಂಸವನ್ನು ತಿಂದು ಮ್ಯಾನೇಜರ್ ತನಗೆ ಮೋಸವನ್ನು ಎಸಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಸ್ಬಿಐ ಶಾಖೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.