

ನರೇಂದ್ರ ಎಸ್ ಮರಸಣಿಗೆ ಹೆಬ್ರಿ
ಬಸದಿ ರಸ್ತೆಯಿಂದ ಕೆಳಕರಾಡಿ ತನಕ ಹೋಗುವ ಮಾರ್ಗಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ನಡೆದುಕೊಂಡು ಹೋಗಲು ಹರಸಾಹಸಪಡಬೇಕಾಗುತ್ತದೆ. ಅನೇಕ ವರ್ಷಗಳಿಂದ ಕೇವಲ ಆಶ್ವಾಸನೆಗಷ್ಟೇ ಸೀಮಿತವಾದ ರಸ್ತೆ ದುರಸ್ತಿ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ.
ಕೆಳಕಾರಡಿಯಲ್ಲಿ ಸುಮಾರು 30 ಕುಡುಬಿ ಸಮುದಾಯದವರ ಮನೆ ಇದ್ದು, ಹಲವು ವರ್ಷಗಳಿಂದ ರಸ್ತೆ ದುರಸ್ತಿಗೆ ಬೇಡಿಕೆ ಇಡುತ್ತಲೇ ಇದ್ದಾರೆ. ಈ ರಸ್ತೆಯಾಗಿ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಬಾಡಿಗೆ ವಾಹನಗಳು ಬರಲು ಹಿಂಜರಿಯುತ್ತಿದ್ದು, ಕೃಷಿಕರು ಮಾರುಕಟ್ಟೆ ಸಂಪರ್ಕಿಸಲು ಹರಸಾಹಸಪಡುತ್ತಿದ್ದಾರೆ.
ಮಳೆಗಾಲದಲ್ಲಿ ರಸ್ತೆಯ ಹಲವೆಡೆ ಹುಗಿಯುವುದರಿಂದ ಸ್ಥಳೀಯರು ಸೇರಿ ಜಲ್ಲಿ ಹಾಗೂ ಕಲ್ಲುಗಳನ್ನು ಸುರಿದು ಬಹುತೇಕ ಕಡೆ ರಸ್ತೆ ದುರಸ್ತಿ ಮಾಡಿದ್ದಾರೆ. ಆದರೂ ಈ ವರ್ಷದ ಮಳೆಗೆ ಮತ್ತೊಮ್ಮೆ ಅನೇಕ ಕಡೆಗಳಲ್ಲಿ ರಸ್ತೆ ಹಾನಿಗೀಡಾಗಿವೆ.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಹೊಂಡಗಳೇ ಅಧಿಕವಿರುವುದರಿಂದ ವಾಹನ ಸವಾರರೂ ಪರದಾಡುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿ ಈ ರಸ್ತೆಗೆ ಕೋಳಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಹಿತ ಮದ್ಯದ ಬಾಟಲಿಗಳನ್ನು ಎಸೆಯಲಾಗುತ್ತಿದೆ.
ಪ್ರತಿ ಬಾರಿಯೂ ಚುನಾವಣೆ ಸಮೀಪಿಸಿದಾಗ ಕೆಳಕರಾಡಿ ರಸ್ತೆ ಅಭಿವೃದ್ಧಿಗೊಳಿಸುವ ಕುರಿತು ಸರ್ವ ಪಕ್ಷದ ಮುಖಂಡರು ಕೇವಲ ಭರವಸೆಯನ್ನಷ್ಟೇ ನೀಡುತ್ತರೆ ವಿನಃ ದುರಸ್ತಿ ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಲೇ ಇದೆ. ಗಣಿಗಾರಿಕೆಯ ವಾಹನಗಳ ಸಂಚಾರದಿಂದ ರಸ್ತೆ ಹದಗೆಡುವಿಕೆ ಹೆಚ್ಚಾಗಿದೆ. ಪದೇ ಪದೇ ಗಣಿಗಾರಿಕೆಗೆ ತಡೆ ತಂದರೂ ಕೆಲವು ಸಮಯದ ಬಳಿಕ ಮತ್ತೆ ಆರಂಭಗೊಳ್ಳುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳು ತಮಗಿಷ್ಟ ಬಂದಂತೆ ರಸ್ತೆ ಅಭಿವೃದ್ಧಿ ಬಗ್ಗೆ ಹೇಳಿಕೆ ನೀಡುತ್ತಾರೆ ವಿನಃ ಕಾರ್ಯರೂಪಕ್ಕೆ ತರಲು ಅಸಮರ್ಥರಾಗಿದ್ದಾರೆ. ಶಾಸಕರೂ ಭರವಸೆ ನೀಡಿದ್ದಷ್ಟೆ ಹೊರತು ಅಭಿವೃದ್ಧಿಗೊಳಿಸಿಲ್ಲ.-ಮಿಥುನ್ ಶೆಟ್ಟಿ, ಸಾಮಾಜಿಕ ಮುಖಂಡ
ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆ ದುರಸ್ತಿ ಮಾಡುವುದು ನಮ್ಮ ದೌರ್ಭಾಗ್ಯ. ಅಕ್ರಮ ಗಣಿಗಾರಿಕೆಯಿಂದ ರಸ್ತೆ ಕೂಡ ಹಾಳಾಗಿದೆ. ನಮ್ಮ ಕುಟುಂಬದ 30 ಮನೆಗಳಿಗೆ ನ್ಯಾಯ ದೊರಕಿಸಿ ಕೊಡಬೇಕು.-ಕೃಷ್ಣ ನಾಯ್ಕ, ಸ್ಥಳೀಯ
ರಸ್ತೆ ದುರಸ್ತಿ ಬಗ್ಗೆ ಊರಿನ ಜನರು ನಮಗೆ ಮನವಿ ನೀಡಲಿ.ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಕಲ್ಲು ಗಣಿಗಾರಿಕೆ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಕ್ರಮ ವಹಿಸಲಾಗುವುದು.-ಎಸ್.ಎ ಪ್ರಸಾದ್, ತಹಸೀಲ್ದಾರ್, ಹೆಬ್ರಿ