3,024 ಕೋಟಿ ರೂ. ಯೋಜನೆಗಳಿಗೆ ಕೊಕ್ಕೆ; ಸಚಿನ್​ ಪೈಲಟ್​ ಬಂಡಾಯಕ್ಕೆ ಸಿಕ್ಕಿತು ಕಾರಣ

pilot_gehlot
Published on

ಜೈಪುರ: ತಾವು ಹೊಂದಿದ್ದ ಖಾತೆಗಳಿಗೆ ಸಂಬಂಧಿಸಿದಂತೆ 3,024 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳ ಅನುದಾನಕ್ಕೆ ವಿತ್ತ ಸಚಿವಾಲಯ ಕೊಕ್ಕೆ ಹಾಕಿದ್ದೇ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಸಚಿನ್​ ಪೈಲಟ್​ ಬಂಡಾಯದ ಕಹಳೆ ಮೊಳಗಿಸಲು ಕಾರಣ ಎಂಬುದು ಇದೀಗ ಬಹಿರಂಗವಾಗಿದೆ.

ಡಿಸಿಎಂ ಆಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಇಲಾಖೆಯ ಸಚಿವರೂ ಆಗಿದ್ದ ಸಚಿನ್​ ಪೈಲಟ್​ 2019-20ನೇ ಸಾಲಿನಲ್ಲಿ ತಮ್ಮ ಖಾತೆಗೆ ಸಂಬಂಧಪಟ್ಟಂತೆ 3,024 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ಮುಂದಾಗಿದ್ದರು. ಆದರೆ ಆರ್ಥಿಕ ಸಚಿವಾಲಯ ಅನಗತ್ಯವಾಗಿ ಈ ಯೋಜನೆಗಳ ಅನುದಾನ ಬಿಡುಗಡೆಯನ್ನು ತಡೆಹಿಡಿದಿತ್ತು ಎನ್ನಲಾಗಿದೆ.

ರಾಜಸ್ಥಾನದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸಚಿವಾಲಯ ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೀವ ಸ್ವರೂಪ್​ ನೇತೃತ್ವದ ರಾಜ್ಯ ಮಟ್ಟದ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿಯೊಂದಿಗೆ ಇದ್ದ ವ್ಯತ್ಯಾಸಗಳ ಬಗ್ಗೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ.

ಈ ಯೋಜನೆಗಳಿಗೆ ರಾಜ್ಯ ಆರ್ಥಿಕ ಆಯೋಗದ (ಎಸ್​ಎಫ್​ಸಿ-5) ನಿಧಿಯಡಿಯಲ್ಲಿ ಅನುದಾನ ಕೊಡಬೇಕಾಗಿತ್ತು. ಆದರೆ, ವಿತ್ತ ಖಾತೆಯನ್ನು ಹೊಂದಿದ್ದ ಸಿಎಂ ಅಶೋಕ್​ ಗೆಹ್ಲೋಟ್​ ಅನುದಾನ ಬಿಡುಗಡೆ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಂತರ ಇಲಾಖೆಯ ವ್ಯತ್ಯಾಸಗಳು ಎಂಬ ಶೀರ್ಷಿಕೆಯಡಿ ರಾಜಸ್ಥಾನದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​ ಸಚಿವಾಲಯ ವರದಿಯನ್ನು ಬಿಡುಗಡೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net