

ಇಂಫಾಲ್: ಹಮರ್ ಬುಡಕಟ್ಟು ನಾಯಕನ ಮೇಲಿನ ದಾಳಿಯನ್ನು ಪ್ರತಿಭಟಿಸಿ ಮಣಿಪುರದ ಚುರಚಂದಪುರ ಜಿಲ್ಲೆಯಲ್ಲಿ ಬಂದ್ಗೆ ಕರೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಉದ್ವಿಗ್ನತೆ ಉಂಟಾಗಿದ್ದು, ಶಾಂತಿ ಕಾಪಾಡಲು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ(Prohibitory Order Imposed). ಮಣಿಪುರದ ಚುರಚಂದಪುರ ಜಿಲ್ಲಾ ಕೇಂದ್ರ ಪಟ್ಟಣದಲ್ಲಿ ಹಮರ್ ಬುಡಕಟ್ಟು ನಾಯಕನ ಮೇಲೆ ಅಪರಿಚಿತ ದುಷ್ಕರ್ಮಿಗಳು ಭಾನುವಾರ(ಮಾರ್ಚ್ 17) ದಾಳಿ ನಡೆಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಜಿಲ್ಲೆಯಾದ್ಯಂತ ಬಿಎನ್‌ಎಸ್‌ಎಸ್ 2023ರ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದರು. ಕಾನೂನು ಮತ್ತು ಸುವ್ಯವಸ್ಥೆಯ ಉಲ್ಲಂಘನೆಯ ಗಂಭೀರ ಆತಂಕವನ್ನು ಉಲ್ಲೇಖಿಸಿ ಚುರಚಂದಪುರ ಜಿಲ್ಲೆಯು ಮುಂದಿನ ಸೂಚನೆ ಬರುವವರೆಗೆ ಸಂಪೂರ್ಣ ಕಂದಾಯ ಜಿಲ್ಲೆಯಾದ್ಯಂತ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಾಜ್ಞೆಗಳನ್ನು ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಜೀವ ಮತ್ತು ಆಸ್ತಿಗೆ ಹಾನಿ ಸೇರಿದಂತೆ ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಗೆ ಧಕ್ಕೆ ತರಬಹುದು. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 163ರ ಅಡಿಯಲ್ಲಿ ಹೊರಡಿಸಲಾದ ಈ ಆದೇಶವು ಅನಧಿಕೃತ ಮೆರವಣಿಗೆಗಳು ಅಥವಾ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಕಾನೂನುಬಾಹಿರ ಸಭೆಯನ್ನು ನಿಷೇಧಿಸಿದೆ. ಕೋಲುಗಳು, ರಾಡ್‌ಗಳು ಮತ್ತು ಕಲ್ಲುಗಳು ಸೇರಿದಂತೆ ಆಯುಧಗಳಾಗಿ ಬಳಸಬಹುದಾದ ಶಸ್ತ್ರಾಸ್ತ್ರಗಳು ಅಥವಾ ಉಪಕರಣಗಳನ್ನು ಸಾಗಿಸುವುದನ್ನು ಸಹ ನಿಷೇಧಿಸಿದೆ.(ಏಜೆನ್ಸೀಸ್)