

ಮುಂಬೈ: ಔರಂಗಜೇಬನ ಸಮಾಧಿ(Aurangzeb Tomb) ಬಳಿ ಭದ್ರತೆ ಹೆಚ್ಚಿಸಲಾಗಿದೆ. ಬಲಪಂಥೀಯ ಸಂಘಟನೆಗಳಿಂದ ಬೆದರಿಕೆಗಳು ಮತ್ತು ಕೆಲವು ನಾಯಕರ ಹೇಳಿಕೆಗಳ ನಂತರ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಈ ಸಂಘಟನೆಗಳು ಸಮಾಧಿಯನ್ನು ಕೆಡವಲು ಬಯಸುತ್ತಿವೆ. ಖುಲ್ದಾಬಾದ್ನಲ್ಲಿರುವ ಈ ಸಮಾಧಿ ಛತ್ರಪತಿ ಸಂಭಾಜಿನಗರ ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ಕಳೆದ ಕೆಲವು ದಿನಗಳಿಂದ ಸಮಾಧಿಯೊಳಗೆ ನೇರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ನಿಷೇಧ ಮುಂದೆಯೂ ಮುಂದುವರಿಯಲಿದೆ.
ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಮಾಧಿಯ ಕಡೆಗೆ ಹೋಗುವ ವಾಹನಗಳ ಮೇಲೆ ನಿಗಾ ಇಡಲು ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಇದು ಸಂಚಾರವನ್ನು ನಿಧಾನಗೊಳಿಸುತ್ತದೆ ಮತ್ತು ಕಣ್ಗಾವಲು ಸುಲಭಗೊಳಿಸುತ್ತದೆ. ಎಸ್ಆರ್ಪಿಎಫ್ನ ಒಂದು ತಂಡವು ದಿನದ 24 ಗಂಟೆಗಳ ಕಾಲ ನಿಗಾ ವಹಿಸುತ್ತಿದೆ. ಸಮಾಧಿಯ ಕಾವಲು ಕಾಯಲು ಆರು ಪೊಲೀಸರನ್ನು ನಿರಂತರವಾಗಿ ನಿಯೋಜಿಸಲಾಗುತ್ತದೆ ಎಂದು ಖುಲಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.
ಔರಂಗಜೇಬ್ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ಬಜರಂಗದಳ ಸದಸ್ಯರು ಸೋಮವಾರ ನಾಗ್ಪುರ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಸರ್ಕಾರ ಕ್ರಮಕೈಗೊಳ್ಳದಿದ್ದರೆ ಔರಂಗಜೇಬ್ ಸಮಾಧಿಗೆ ಬಾಬರಿ ಮಸೀದಿಯಂತೆಯೇ ಗತಿಯಾಗುತ್ತದೆ ಎಂದು ಎಚ್ಚರಿಸಿದ್ದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು 1992 ಡಿಸೆಂಬರ್ 6ರಂದು 'ಕರ ಸೇವಕ' ಎಂಬ ಹಿಂದೂ ಕಾರ್ಯಕರ್ತರ ದೊಡ್ಡ ಗುಂಪು ಕೆಡವಿತು. ವಿಎಚ್ಪಿ, ಬಜರಂಗದಳ ಮತ್ತು ಇತರ ಸಂಘಟನೆಗಳು ಈ ಧ್ವಂಸವನ್ನು ನಡೆಸಿದ್ದವು. ನಂತರದ ವರ್ಷಗಳಲ್ಲಿ ಸ್ಥಳದ ಮಾಲೀಕತ್ವದ ಕುರಿತು ಕಾನೂನು ಹೋರಾಟಗಳು ಮುಂದುವರಿದವು. 2019ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ರಾಮಮಂದಿರ (ದೇವಾಲಯ) ನಿರ್ಮಾಣಕ್ಕಾಗಿ ಹಿಂದೂಗಳಿಗೆ ಭೂಮಿಯನ್ನು ನೀಡಲಾಯಿತು ಮತ್ತು ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಪರ್ಯಾಯ ಭೂಮಿಯನ್ನು ಒದಗಿಸಬೇಕೆಂದು ನಿರ್ದೇಶಿಸಿತು.(ಏಜೆನ್ಸೀಸ್)