

ಕಾರವಾರ: ಮಳೆಗಾಲ ಮುಗಿಯುವವರೆಗೆ ಜಿಲ್ಲೆಯ ಎಲ್ಲ ಜಲಪಾತಗಳಿಗೆ ಹಾಗೂ ಸಮುದ್ರ ತೀರಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ತಹಸೀಲ್ದಾರ್ಗಳು ಆದೇಶ ಹೊರಡಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ್ ಆದೇಶಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ಮರುದಿನವೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಕೈಗೊಂಡ ನಿರ್ಣಯ ಹಾಗೂ ಆದೇಶಗಳ ಬಗ್ಗೆ ಅವರು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಕ್ರಮ ವಹಿಸಲು ತಹಸೀಲ್ದಾರ್ಗಳು ಆದೇಶ ಮಾಡಬೇಕು. ಈ ಕುರಿತು ಪಂಚಾಯಿತಿ ನೋಡಲ್ ಅಧಿಕಾರಿಗಳ ಮಟ್ಟದಲ್ಲಿ ತಿಳುವಳಿಕೆ ನೀಡಲು ಕ್ರಮ ವಹಿಸಬೇಕು.
ತಾಪಂ, ಇಒ, ಗ್ರಾಪಂ ಪಿಡಿಓ, ಕರಾವಳಿ ಕಾವಲು ಪಡೆ, ಪೊಲೀಸ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಆದೇಶ ಜಾರಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೀಗಾರ ರಸ್ತೆಯಂಚಿನಲ್ಲಿ ಬಿರುಕು
ಮಳೆ ಮುನ್ನೆಚ್ಚರಿಕೆ ಇರುವಾಗ ಅಪಾಯಕಾರಿ ಸ್ಥಳಗಳಲ್ಲಿ ಇರುವ ಪ್ರವಾಸಿಗರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಕ್ರಮ ವಹಿಸಬೇಕು. ಅಂಥ ಸ್ಥಳಗಳ ರೆಸಾರ್ಟ್ ಹಾಗೂ ಹೋಂ ಸ್ಟೇ ಗಳಲ್ಲಿರುವ ಪ್ರವಾಸಿಗರನ್ನು ನೀರಿಗೆ ಇಳಿಯದಂತೆ ತಿಳುವಳಿಕೆಯನ್ನು ಸಂಬಂಧಪಟ್ಟ ಮಾಲೀಕರ ಮೂಲಕ ನೀಡಬೇಕು.
ನದಿಗಳು ಅಪಾಯದ ಮಟ್ಟದಲ್ಲಿ ಹರಿಯುವಾಗ ಪ್ರವಾಸಿಗರು ತೆರಳದಂತೆ ಮೈಕ್ನಲ್ಲಿ ಘೋಷಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಹಾನಿಗಳ ಬಗ್ಗೆ ಆಗಸ್ಟ್ 3 ರ ಒಳಗೆ ತಹಸೀಲ್ದಾರ್ಗಳ ಮೂಲಕ ವರದಿ ಸಲ್ಲಿಸಬೇಕು. ಆಸ್ಪತ್ರೆ, ಪಿಎಚ್ಸಿಗಳಲ್ಲಿ ಸೋರಿಕೆ ಇರುವ ಬಗ್ಗೆ ಪರಿಶೀಲನೆ ನಡೆಸಿ, ಅದರ ದುರಸ್ತಿಗೆ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಮಳೆ ಮುನ್ನೆಚ್ಚರಿಕೆಗಳ ಬಗ್ಗೆ ಪ್ರಚಾರ ಮಾಡಬೇಕು ಎಂದು ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಹಳ್ಳಗಳಿಗೆ ಅಳವಡಿಸುವ ಅಪಾಯಕಾರಿ ಮರದ ಕಾಲು ಸಂಕಗಳನ್ನು ಗುರುತಿಸಿ ಆರ್ಸಿಸಿ ಕಿರು ಸೇತುವೆ ನಿರ್ಮಾಣದ ಬಗ್ಗೆ ಅಂದಾಜು ವೆಚ್ಚ ಸಲ್ಲಿಸಬೇಕು. ಜಿಎಸ್ಐ ಗುರುತಿಸಿದ ಭೂ ಕುಸಿತ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಬೇಕಾದ ಅಂದಾಜು ಪಟ್ಟಿ ತಯಾರಿಸಿ ಜು.31 ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದು ಡಿಸಿ ಗಂಗುಬಾಯಿ ಮಾನಕರ್ ತಿಳಿಸಿದ್ದಾರೆ.