ಪ್ರೊ.ಜಿ.ಎಸ್.ಸಿದ್ದಲಿಂಗಯ್ಯಗೆ ಬಸವ ಪ್ರಶಸ್ತಿ ಪ್ರದಾನ ಮಾಡಿದ ಸುತ್ತೂರು ಸ್ವಾಮೀಜಿ

gss
Published on

ಬೆಂಗಳೂರು : 12 ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ನಿಜ ಅರ್ಥದಲ್ಲಿ ಜನತಾ ಪಾರ್ಲಿಮೆಂಟ್‌ ಆಗಿತ್ತು. ಸೂಳೆ ಸಂಕವ್ವ ಸೇರಿದಂತೆ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ದೊರೆತಿತ್ತು. ಇದನ್ನು ಇಂದಿನ ಪಾರ್ಲಿಮೆಂಟ್‌ಗೆ ಹೋಲಿಸಲು ಸಾಧ್ಯವಿಲ್ಲ ಎಂದು ಹಿರಿಯ ಕವಿ ಪ್ರೊ.ಜಿ.ಎಸ್‌.ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಕಲಬುರಗಿಯ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ನಿಂದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 2025ನೇ ಸಾಲಿನ ‘ಬಸವ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

12 ನೇ ಶತಮಾನವು ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಕಾಲವಾಗಿದೆ. ಸಾಹಿತ್ಯ ಚರಿತ್ರಕಾರರು, ಇತಿಹಾಸಕಾರರು ಇದನ್ನು ಬಸವಯುಗ ಎಂದು ಕರೆದಿದ್ದಾರೆ. ಈ ಕಾಲಘಟ್ಟವು ರಾಜ್ಯಾಂಗಕ್ಕೆ ಸಂಬಂಧಿಸಿದಂತೆ ಹೊಸ ಸಿದ್ಧಾಂತವನ್ನು ನೀಡಿದೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಆಡಳಿತ ಹೇಗಿರಬೇಕು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಆದರೆ ಈಗಿನ ಸಂಸತ್‌ನಲ್ಲಿ ಇದೆಲ್ಲವೂ ಅಡಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಉತ್ಸಾಹ, ಸ್ಫೂರ್ತಿ ನೀಡಿದವರು ಬಸವಣ್ಣ. ಇದು ವೀರಶೈವ ಲಿಂಗಾಯತ ಸಮುದಾಯಕ್ಕಲ್ಲ, ಇಡೀ ವಿಶ್ವಕ್ಕೇ ನೀಡಿದ ಕೊಡುಗೆಯಾಗಿದೆ. ಆದರೆ ಡಾ.ಸ್ಪೀಡ್‌, ಎ.ವೆಂಕಟಸುಬ್ಬಯ್ಯ ಸೇರಿದಂತೆ ಹಲವರು ಬಸವಣ್ಣನ ಅಸ್ತಿತ್ವವನ್ನೇ ಪ್ರಶ್ನಿಸಿದರು. ಬಸವಣ್ಣ ಎಂಬುದು ದಂತಕಥೆ ಎಂದೆಲ್ಲಾ ಹೇಳಿದರು. ಆದರೆ ಬಸವಣ್ಣನ ಅಸ್ತಿತ್ವಕ್ಕೆ ಸಾಕಷ್ಟು ಶಾಸನಗಳ ಪುರಾವೆ ಇದೆ ಎಂದು ಸ್ಪಷ್ಟಪಡಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಸುತ್ತೂರು ಮಠದ ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ದಲಿಂಗಯ್ಯ ಘನ ವಿದ್ವಾಂಸರಾಗಿದ್ದು ಜನಪರ ಕಾಳಜಿ ಹೊಂದಿದ್ದಾರೆ. ಸಿದ್ದಲಿಂಗಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದಾಗ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಸಮ್ಮೇಳನದ ಹಿಂದಿನ ದಿನ ಅವರೇ ಸ್ವತಃ ಕೌಂಟರ್‌ನಲ್ಲಿ ಕುಳಿತು ಅತಿಥಿಗಳ ನೋಂದಣಿ ಮಾಡಿಸಿದ್ದ ಸರಳ ಜೀವಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಟ್ರಸ್ಟ್‌ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು..

ಜಿಎಸ್ಸೆಸ್‌ಗೆ ಬಸವ ಪುರಸ್ಕಾರ ನೀಡಲು ಒತ್ತಾಯ

ಹಿರಿಯ ಕವಿ ಪ್ರೊ.ಜಿ.ಎಸ್‌ಸಿದ್ದಲಿಂಗಯ್ಯ ಅವರಿಗೆ ರಾಜ್ಯ ಸರ್ಕಾರ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಬೇಕು ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಮಾತನಾಡಿ, ಸಿದ್ದಲಿಂಗಯ್ಯ ಅವರಿಗೆ ರಾಷ್ಟ್ರೀಯ ಬಸವ ಪುರಸ್ಕಾರ ಸಂದಿಲ್ಲ. ಪಂಪ ಪ್ರಶಸ್ತಿಗೂ ಅರ್ಹತೆ ಹೊಂದಿದ್ದಾರೆ. ಈ ಪ್ರಶಸ್ತಿಗಳು ಅವರಿಗೆ ಸಂದು ಪ್ರಶಸ್ತಿಯ ಗೌರವ ಹೆಚ್ಚಾಗಲಿ ಎಂದು ಆಶಿಸಿದ ವಿಮರ್ಶಕಿ ಡಾ.ಎಂ.ಎಸ್‌.ಆಶಾದೇವಿ ಮಾತನಾಡಿ, ಸಿದ್ದಲಿಂಗಯ್ಯ ಅವರು ಹಳೆಗನ್ನಡ, ನಡುಗನ್ನಡ, ಹೊಸಗನ್ನಡದಲ್ಲೂ ಸಾಹಿತ್ಯ ಕೃಷಿ ನಡೆಸಿದ್ದಾರೆ. ರಾಜ್ಯ ಸರ್ಕಾರದಿಂದ ಇನ್ನೂ ಅವರಿಗೆ ಬಸವ ಪುರಸ್ಕಾರ ಪ್ರದಾನವಾಗಿಲ್ಲ. ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net