

ಬೆಂಗಳೂರು: ಜಗತ್ತಿನಲ್ಲಿ ಹಲವು ವಿದ್ಯೆಗಳಿದ್ದು, ಆ ಎಲ್ಲ ವಿದ್ಯೆಗಳಲ್ಲಿ ಶ್ರೇಷ್ಠವಾದುದು ಶಿವಜ್ಞಾನ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದ್ದಾರೆ.
ಸಮಾರಂಭದಲ್ಲಿ ಶಹಾಪುರ, ನಾಗಣಸೂರ ಮಠದ ಶ್ರೀಗಳು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ವೀರಶೈವ ಮಹಾಸಭೆಯ ಕಾರ್ಯದರ್ಶಿ ವಾಗೀಶ ಪ್ರಸಾದ್, ಹಿರಿಯ ಸಂಸ್ಕೃತ ವಿದ್ವಾಂಸ ಡಾ.ಎಂ.ಶಿವಕುಮಾರಸ್ವಾಮಿ, ಡಾ.ಎಂ.ಜಿ.ನಾಗರಾಜ, ಡಾ.ಸಿ.ಶಿವಕುಮಾರಸ್ವಾಮಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಪ್ರತಿಷ್ಠಾನದ ಉಪಾಧ್ಯಕ್ಷರಾದ ಬಿ.ಎಸ್.ಚನ್ನಬಸವಾರಾಧ್ಯ, ಎಂ.ಮಾದಯ್ಯ, ಕಾರ್ಯದರ್ಶಿ ಡಾ.ಸಿ.ಯು.ಉಮಾದೇವಿ, ಸಹ ಕಾರ್ಯದರ್ಶಿ ಕೆ.ಎಸ್.ಗಾಯತ್ರಿ, ಶಾಂತ ವಿ.ಗೌಡ್, ಪ್ರಣಾಮ ಜಯಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶಿವಗಂಗೆ ಮೇಲಣಗವಿ ಮಠದ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳಿಗೆ ಶಿವಕಮಲ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಪ್ರವಚನ ಮಾಡಿದರು.
ಶಿವೋಹಂ ಎಂಬ ಭಾವನೆ ಬೆಳೆಯಬೇಕಾದರೆ ಈ ಜಗತ್ತು ಶಿವಮಯವಾಗಿದ್ದು, ಶಿವನಿಗೆ ಭಿನ್ನವಾಗಿರುವುದು ಏನೂ ಇಲ್ಲ ಎಂಬ ಸತ್ಯದ ಅರಿವು ಅವಶ್ಯಕ. ಅಂತಹ ಶಿವಜ್ಞಾನ ಜಾಗೃತವಾಗುವುದಕ್ಕೆ ಮೊದಲು ಲೌಕಿಕ ಜ್ಞಾನವನ್ನು ಪಡೆದು ಪರಿಪೂರ್ಣನಾದ ವ್ಯಕ್ತಿ ಆತ್ಮಜ್ಞಾನವನ್ನು ಸಂಪಾದಿಸುಕೊಳ್ಳಬೇಕು. ಆ ಆತ್ಮಜ್ಞಾನದಿಂದ ಶಿವಜ್ಞಾನ ಸಂಪನ್ನತೆ ಪ್ರಾಪ್ತಿಯಾಗುತ್ತದೆ. ಆ ತುರ‌್ಯಾವಸ್ಥೆಯನ್ನು ತಲುಪಿದ ಜೀವಾತ್ಮ ಸ್ವತಃ ಶಿವನ ಅಂಶವೇ ಆಗುತ್ತಾನೆ. ವೀರಶೈವ ಸಿದ್ಧಾಂತದಲ್ಲಿ ಈ ಸ್ಥಿತಿಯನ್ನು ಮುಕ್ತಿ ಅಥವಾ ಐಕ್ಯ ಎಂದು ಕರೆಯಲಾಗುತ್ತದೆ. ಬೇರೆಲ್ಲಾ ಸಿದ್ಧಾಂತಗಳಲ್ಲಿ ಮರಣದ ನಂತರ ಮುಕ್ತಿಯ ಪರಿಕಲ್ಪನೆ ಇದ್ದು, ವೀರಶೈವ ಸಿದ್ಧಾಂತದಲ್ಲಿ ಬದುಕಿರುವಾಗಲೇ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ಆದಿ ಆಚಾರ್ಯರು ತೋರಿಸಿದ್ದಾರೆ ಎಂದರು.
ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಆಯೋಜಿಸಿದ್ದ ಶಿವಕಮಲ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.