

ಈ ವರ್ಷದ ಸೂಪರ್ ಹಿಟ್ ಸಿನಿಮಾ ಎಂದೇ ಕರೆಸಿಕೊಂಡಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ಮನ್ ಸಿನಿಮಾ ಪ್ರೇಕ್ಷಕರಿಂದ ಒಳ್ಳೇ ವಿಮರ್ಶೆಯನ್ನೇ ಗಟ್ಟಿಸಿಕೊಂಡಿತ್ತು. ಅದೇ ರೀತಿ, ಒಳ್ಳೇ ಮೊತ್ತಕ್ಕೆ ಟಿವಿ ಹಕ್ಕುಗಳು ಮಾರಾಟವಾಗಿದ್ದವು. ಹೀಗಿರುವಾಗಲೇ ಮೊನ್ನೆಯಷ್ಟೇ ಟಿವಿಯಲ್ಲಿ ಪ್ರಸಾರವಾಗಿದ್ದ ಜಂಟಲ್ಮನ್ ಸಿನಿಮಾ ಇದೀಗ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ!
ಹೌದು, ಅಭಿ ಗೌಡ ಎಂಬುವವರು, ಟಿವಿಯಲ್ಲಿ ಪ್ರಸಾರವಾಗಿದ್ದ ಜಂಟಲ್ಮನ್ ಸಿನಿಮಾವನ್ನು ಫೋನ್ನಲ್ಲಿ ರೆಕಾರ್ಡ್ ಮಾಡಿ, ಫೇಸ್ಬುಕ್ ಖಾತೆ ಮೂಲಕ ಅಪ್ಲೋಡ್ ಮಾಡಿದ್ದ. ಈ ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಅದನ್ನು ಶೇರ್ ಮಾಡಿಕೊಂಡು, ಅಲ್ಲಿಯೇ ಸಿನಿಮಾ ನೋಡಿದ್ದಾರೆ.
ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ, ‘ಶನಿವಾರ ಸಂಜೆ ಉದಯ ಟಿವಿಯಲ್ಲಿ ಸಿನಿಮಾ ಪ್ರಸಾರವಾಗಿದೆ. ಅದನ್ನು ರೆಕಾರ್ಡ್ ಮಾಡಿ ಭಾನುವಾರ ಪೋಸ್ಟ್ ಮಾಡಿದ್ದಾರೆ. ಅಪ್ಪು ರಾಜರತ್ನ ಎಂಬ ಫೇಸ್ಬುಕ್ ಅಕೌಂಟ್ನಿಂದ ಈ ಕೆಲಸ ಆಗಿದ್ದೇ ತಡ, ಅವರನ್ನು ಸಂಪರ್ಕಿಸಿ ವಿಡಿಯೋ ಡಿಲಿಟ್ ಮಾಡಿಸಿದ್ದೇವೆ. ಅಷ್ಟರಲ್ಲಾಗಲೇ 2000 ಬಾರಿ ಶೇರ್ ಆಗಿತ್ತು, 1ಲಕ್ಷಕ್ಕೂ ಹೆಚ್ಚು ಬಾರೀ ವೀಕ್ಷಣೆ ಪಡೆದುಕೊಂಡಿತ್ತು. ಬಳಿಕ ಅಭಿ ಗೌಡ ಶೇರ್ ಮಾಡಿಕೊಂಡಿದ್ದಾರೆ. ಹಾಗಾಗಿ ಸಿನಿಮಾದ ಹಕ್ಕುಗಳು ಉದಯ ವಾಹಿನಿ ಕಡೆ ಇರುವುದರಿಂದ, ಅವರ ಗಮನಕ್ಕೆ ತಂದಿದ್ದೇನೆ. ದೂರು ನೀಡಲು ಮುಂದಾಗಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.
ಇನ್ನು ಈ ರೀತಿ ರೆಕಾರ್ಡ್ ಮಾಡಿ ಸಿನಿಮಾ ಅಪ್ಲೋಡ್ ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಅಂಥ ಪ್ರಕರಣಗಳು ಕಂಡು ಬಂದಲ್ಲಿ. ಆ ಕೆಲಸ ಮಾಡಿದ ವ್ಯಕ್ತಿಯ ವಿರುದ್ಧ ದೂರು ನೀಡಬಹುದು. ಜೈಲು ಶಿಕ್ಷೆಯನ್ನೂ ವಿಧಿಸಲಾಗುತ್ತದೆ.
ಅಂದಹಾಗೆ, ಪ್ರಜ್ವಲ್ ನಾಯಕನಾಗಿ ನಟಿಸಿದರೆ, ನಿಶ್ವಿಕಾ ನಾಯ್ಡು ನಾಯಕಿಯಾಗಿದ್ದರು. ಇನ್ನುಳಿದಂತೆ ಸಂಚಾರಿ ವಿಜಯ್ ಸಹ ಪೊಲೀಸ್ ಪಾತ್ರ ನಿಭಾಯಿಸಿದ್ದರು. ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿತ್ತು.