

ರಾಯಚೂರು: ಹಿಂದೂ ಎಂಬ ಪದವು ಅಮಾನುಷವಾದ ಶಬ್ಧವಾಗಿದ್ದು, ಈ ಬಗ್ಗೆ ಕಾಶ್ಮೀರ ಶೈವ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರೊ.ಕೆ.ಎಸ್.ಭಗವಾನ್ (KS Bhagawan) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಕನಕ ಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಾಹಿತ್ಯ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ ಪ್ರೊ.ಕೆ.ಎಸ್.ಭಗವಾನ್ (KS Bhagawan) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಠಗಳ ಬಗ್ಗೆ ಜನರಿಗೆ ಸರಿಯಾದ ತಿಳುವಳಿಕೆ ಇಲ್ಲ. ಸನಾತನ, ವೈದಿಕ ಧರ್ಮ, ಬ್ರಾಹ್ಮಣ ಧರ್ಮ ಜಾತಿ ವ್ಯವಸ್ಥೆ ಪ್ರೋತ್ಸಾಹಿಸುತ್ತದೆ. ನಾಲ್ಕು ವರ್ಣಗಳಲ್ಲಿ ಕ್ಷತ್ರಿಯ, ವೈಶ್ಯ ವ್ಯವಸ್ಥೆ ನಶಿಸಿವೆ. ಬ್ರಾಹ್ಮಣ ಹಾಗೂ ಶೂದ್ರ ಮಾತ್ರ ಉಳಿದಿವೆ. ಜನಿವಾರ ಧರಿಸುವ ಶೇ.3ಜನರು ಬ್ರಾಹ್ಮಣರು, ಉಳಿದವರೆಲ್ಲರೂ ಶೂದ್ರರು, ಹಿಂದೂ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಸಂವಿಧಾನ ತೆಗೆದು ಮನು ಸ್ಮೃತಿ ತರುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್ 131 ಸ್ಮೃತಿ ಪಟ್ಟಿಮಾಡಿ ಮನು ಸ್ಮೃತಿ ಸುಟ್ಟು ಹಾಕಿದ್ದರು, ಪೆರಿಯಾರ್ ಸ್ಮೃತಿ ಸುಟ್ಟಿದ್ದರೆ, ಕನಕದಾಸರು ಹಾಗೂ ಸ್ವಾಮಿ ವಿವೇಕಾನಂದರು ಮನು ಸ್ಮೃತಿ ವಿರೋಧಿಸಿದ್ದರು. ಶಾಲಾ ಕಾಲೇಜಿನ ಇತಿಹಾಸ ಸುಳ್ಳಿನ ಕಂತೆ, ಬುದ್ಧ ಬಸವ ಅಂಬೇಡ್ಕರ್ ಧರ್ಮವೇ ರಾಷ್ಟ್ರೀಯ ಧರ್ಮವಾಗಿದೆ.
ಸ್ವಾಮಿ ವಿವೇಕಾನಂದರರು ಅಮೇರಿಕದ ಚಿಕಾಗೋ ಭಾಷಣದಲ್ಲಿ ಹಿಂದು ಧರ್ಮ ಎತ್ತಿಹಿಡಿಯಲಿಲ್ಲ, ಇತಿಹಾಸ ತಿರುಚಿ ನಮಗೆ ಬೋಧನೆ ಮಾಡಲಾಗುತ್ತಿದೆ. ವಿವೇಕಾನಂದರು ಮಾನವ ಜನಾಂಗದ ತತ್ವಗಳನ್ನು ಎತ್ತಿ ಹಿಡಿದಿದ್ದಾರೆ, ಆದರೆ ಕಟ್ಟರ್ವಾದಿಗಳು ತಿರುಚಿ ಹೇಳುತ್ತಾರೆ. ಹಿಂದೂ ಧರ್ಮದಲ್ಲಿ ಸಂಕುಚಿತ ಮನೋಭಾವ, ತಾರತಮ್ಯ ನೀತಿ ಇದೆ. ಸಮಾನತೆ ಸಾರಿದ ಬಸವಣ್ಣನವರನ್ನು ಕೊಂದು ಹಾಕಿದ್ರು, ಇನ್ನು ಸಾಮಾನ್ಯ ಜನರನ್ನು ಬಿಡ್ತಾರಾ ಎಂದು ಪ್ರೊ.ಕೆ.ಎಸ್.ಭಗವಾನ್ (KS Bhagawan) ಪ್ರಶ್ನಿಸಿದ್ದಾರೆ.