ಟೆಸ್ಟ್​ ಸರಣಿ ಸೋಲಿನ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​; ಚಾಂಪಿಯನ್ಸ್​ ಟ್ರೋಫಿಗೆ Jasprit Bumrah ಅಲಭ್ಯ?

jasprit bumrah
Published on

ಮುಂಬೈ: ಜನವರಿ 05ರಂದು ಮುಕ್ತಾಯಗೊಂಡ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಟೀಮ್​ ಇಂಡಿಯಾದ ಸ್ಟಾರ್​ವೇಗಿ ಜಸ್ಪ್ರೀತ್​ ಬುಮ್ರಾ (Jasprit Bumrah) ಬೆನ್ನು ನೋವಿನ ಕಾರಣ ಪಂದ್ಯದ ಮಧ್ಯದಲ್ಲೇ ಮೈದಾನದಿಂದ ಹೊರ ನಡೆದಿದ್ದರು. ಸರಣಿ ಮುಗಿದ ಬೆನ್ನಲ್ಲೇ ಜಸ್ಪ್ರೀತ್​ ಬುಮ್ರಾ ಆರೋಗ್ಯದ ಕುರಿತಂತೆ ಒಂದೊಂದೆ ಮಾಹಿತಿ ಹೊರಬೀಳುತ್ತಿದ್ದು, ಚಾಂಪಿಉಯನ್ಸ್​ ಟ್ರೋಫಿಯಲ್ಲಿ ಇದು ತಂಡದ ಮೇಲೆ ಪರಿಣಾಮ ಬೀಳಬಹುದು ಎಂದು ಹೇಳಲಾಗಿದೆ.

ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, ಬಿಸಿಸಿಐ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಆದರೆ, ಭಾರತದ ತಂಡದ ವಿಚಾರಕ್ಕೆ ಬರುವುದಾದರೆ ಜಸ್ಪ್ರೀತ್​ ಬುಮ್ರಾ (Jasprit Bumrah) ಇಂಗ್ಲೆಂಡ್​ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್​ ಟ್ರೋಪಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಭಾರತದ ಚಿಂತೆಯನ್ನು ಹೆಚ್ಚಿಸಿದೆ.

Jasprit Bumrah

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜಸ್ಪ್ರೀತ್​ ಬುಮ್ರಾ (Jasprit Bumrah) ಚಾಂಪಿಯನ್ಸ್​ ಟ್ರೋಫಿಯ ಮೊದಲ ಸುತ್ತಿನ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ಧಾರೆ ಎಂದು ಹೇಳಲಾಗಿದ್ದು, ಈ ವಿಚಾರ ಟೀಮ್​ ಮ್ಯಾನೇಜ್​ಮೆಂಟ್​ಅನ್ನು ಚಿಂತೆಗೆ ದೂಡಿದೆ. ವೈದ್ಯರು ಬುಮ್ರಾಗೆ ರೆಸ್ಟ್​ ಮಾಡುವಂತೆ ಸೂಚಿಸಿದ್ದು, ಮೊದಲ ಸುತ್ತಿನ ಕಾದಾಟದಲ್ಲಿ ಅವರ ಅನುಪಸ್ಥಿತಿ ಟೀಮ್​ ಇಂಡಿಯಾವನ್ನು ಕಾಡಲಿದೆ. ಮಾರ್ಚ್​ ಮೊದಲ ವಾರಕ್ಕೆ ಬುಮ್ರಾ ಫಿಟ್​ ಆಗಲಿದ್ಧಾರೆ ಎಂದು ಹೇಳಲಾಗಿದ್ದು, ನಾಕವಟ್​ ಹಂತದ ಪಂದ್ಯಗಳಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಬುಮ್ರಾ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್​ ವಿರುದ್ಧದ ಪಂದ್ಯಗಳಿಗೆ ಅಲಭ್ಯರಾಗಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಜಸ್​ಪ್ರೀತ್ ಬುಮ್ರಾ ಲಭ್ಯರಿರುವ ಸಾಧ್ಯತೆ ಹೆಚ್ಚಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬೆನ್ನಿನ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ (Jasprit Bumrah) ಸದ್ಯ ಚಿಕಿತ್ಸೆಗೆ ಒಳಗಾಗಿದ್ದು, ಸುಧಾರಿಸಿಕೊಂಡು ಫಿಟ್ನೆಸ್​ ಸಾಬೀತುಪಡಿಸಲು ಮೂರು ವಾರಗಳ ಸಮಯವಕಾಶ ಬೇಕೆಂದು ಹೇಳಲಾಗಿದೆ. ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ ಬುಮ್ರಾಗೆ ರೆಸ್ಟ್​ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಆ ಬಳಿಕ ವೈದ್ಯರು ತಪಾಸಣೆಗೆ ಒಳಪಡಿಸಲಿದ್ದಾರೆ. ಈ ಅವಧಿಯಲ್ಲಿ ಬುಮ್ರಾ ತಮ್ಮ ಫಿಟ್ನೆಸ್​ಅನ್ನು ಸಾಬೀತುಪಡಿಸಿದರೆ ಅವರು ತಂಡಕ್ಕೆ ವಾಪಸ್​ ಆಗಲಿದ್ದಾರೆ. ಇಲ್ಲವಾದಲ್ಲಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net