

ಬೆಂಗಳೂರು: ನಾಯಕ ಮಣಿಂದರ್ ಸಿಂಗ್ (15 ಅಂಕ) ಭರ್ಜರಿ ರೈಡಿಂಗ್ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸತತ 3ನೇ ಪಂದ್ಯದಲ್ಲೂ ಅಜೇಯ ಓಟ ಮುಂದುವರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಮಂಗಳವಾರ ನಡೆದ ಮಾಜಿ ಚಾಂಪಿಯನ್ಗಳ ಮುಖಾಮುಖಿಯಲ್ಲಿ ಬೆಂಗಾಲ್ ತಂಡ 60-42 ಅಂಕಗಳಿಂದ ಪಟನಾ ಪೈರೇಟ್ಸ್ ಎದುರು ಗೆಲುವು ದಾಖಲಿಸಿತು.
ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬೆಂಗಳೂರು ಚರಣದ ಪಂದ್ಯದಲ್ಲಿ ಬೆಂಗಾಲ್ ತಂಡ ಮೊದಲಾರ್ಧದಲ್ಲೇ 27-16ರಿಂದ ಮುನ್ನಡೆ ಸಾಧಿಸಿ ಪ್ರಾಬಲ್ಯ ಮೆರೆಯಿತು.
ನಿತಿನ್ ಕುಮಾರ್ (14) ಮತ್ತು ಶ್ರೀಕಾಂತ್ ಜಾಧವ್ (12) ರೈಡಿಂಗ್ನಲ್ಲಿ ಮಣಿಂದರ್ಗೆ ಸಮರ್ಥ ಸಾಥ್ ನೀಡಿದರು. ಪಟನಾ ಪರ ಸಚಿನ್ (14) ಮತ್ತು ಎಂ. ಸುಧಾಕರ್ (14) ದ್ವೀತಿಯಾರ್ಧದಲ್ಲಿ ದಿಟ್ಟ ತಿರುಗೇಟು ನೀಡಲು ಯತ್ನಿಸಿದರೂ, ಗೆಲುವು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಾಯಕ ನೀರಜ್ ಕುಮಾರ್ ಸಾರಥ್ಯದ ಪಟನಾದ ರಕ್ಷಣಾ ವಿಭಾಗ ತೀವ್ರ ನಿರಾಸೆ ಮೂಡಿಸಿತು.