

ಬೆಂಗಳೂರು: ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಸಿನಿಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ‘ಮ್ಯಾನ್ ಆಫ್ ದಿ ಮ್ಯಾಚ್’ ಹೆಸರಿನ ಚಿತ್ರ ಕೈಗೆತ್ತಿಕೊಂಡಿದ್ದು ಗೊತ್ತಿರುವ ವಿಚಾರವೇ. ಇದೀಗ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದಿಂದ ಅಪ್ಡೇಟ್ ಮಾಹಿತಿಯೊಂದು ಹೊರಬಿದ್ದಿದೆ.
ಅದೇನೆಂದರೆ, ಈ ಚಿತ್ರಕ್ಕೆ ನಟ ಪುನೀತ್ ರಾಜಕುಮಾರ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ! ಮುಹೂರ್ತದ ಸಮಯದಲ್ಲಿ ಸತ್ಯ ಪಿಕ್ಚರ್ಸ್ ಮತ್ತು ಮಯೂರ ಪಿಕ್ಚರ್ಸ್ ಲಾಂಛನದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾ ಮೂಡಿಬರಲಿದೆ ಎಂದು ನಿರ್ದೇಶಕ ಸತ್ಯ ಹೇಳಿದ್ದರು. ಇದೀಗ ಪುನೀತ್ ರಾಜಕುಮಾರ್ ಆಗಮನವಾಗಿದೆ.
‘ಪುನೀತ್ ಅವರ ಸಿನಿಮಾ ನಿರ್ದೇಶನದ ಕೆಲಸ ನಡೆಯುತ್ತಿರುವಾಗಲೇ ಈ ಚಿತ್ರದ ಎಳೆಯನ್ನು ಅವರಿಗೆ ಹೇಳಿದ್ದೆ. ತಡಮಾಡದೇ ಈ ಸಿನಿಮಾ ಆರಂಭಿಸಿ ಎಂದಿದ್ದರು. ನಿರ್ಮಾಣದಲ್ಲಿ ಪಾಲುದಾರರಾಗುವ ಬಗ್ಗೆಯೂ ಅಂದೇ ಹೇಳಿದ್ದರು. ಆದರೆ, ಅಧಿಕೃತ ಘೋಷಣೆ ಮಾಡಿರಲಿಲ್ಲ. ಇದೀಗ ಪಿಆರ್ಕೆ ಪ್ರೊಡಕ್ಷನ್ ಸಹ ನಮ್ಮೊಟ್ಟಿಗಿದೆ. ಸೆಟ್ಗೂ ಪುನೀತ್ ಭೇಟಿ ನೀಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಸತ್ಯಪ್ರಕಾಶ್.