

ಮುಂಬೈ: ಅಮೇರಿಕಾದ ಖ್ಯಾತ ಗಾಯಕ ನಿಕ್ ಜೋನಾಸ್ ಅವರನ್ನು ಬಾಲಿವುಡ್ ನಟಿ ಪ್ರಿಯಾಂಕಾ ಮದುವೆಯಾಗಿ ಎರಡೂವರೆ ವರ್ಷಗಳಾಗಿವೆ. ಪ್ರಿಯಾಂಕಾ ಮತ್ತು ನಿಕ್ ಮದುವೆಯಾದ ಸಂದರ್ಭದಲ್ಲಿ, ಅವರಿಬ್ಬರ ದಾಂಪತ್ಯ ಹೆಚ್ಚು ದಿನ ಇರುವುದಿಲ್ಲ ಎಂದು ಕೆಲವರು ಕುಹಕವಾಡಿದ್ದರು. ಅದನ್ನು ನಿಕ್ ಮತ್ತು ಪ್ರಿಯಾಂಕಾ ಸುಳ್ಳು ಮಾಡಿದ್ದಾರೆ.
ಇಷ್ಟಕ್ಕೂ ಪ್ರಿಯಾಂಕಾ ಮತ್ತು ನಿಕ್ ಅವರು ಸುಖೀ ದಾಂಪತ್ಯದ ಗುಟ್ಟೇನು ಎಂಬ ಪ್ರಶ್ನೆ ಸಹಜವಾಗಿಯ ಬರುತ್ತದೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕಾ, ಆ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಸುಖೀ ದಾಂಪತ್ಯದ ಹಿಂದಿನ ರಹಸ್ಯದ ಬಗ್ಗೆ ಹೇಳುವುದು ಕಷ್ಟ. ಏಕೆಂದರೆ, ನಾವಿಬ್ಬರೂ ಮದುವೆಯಾಗಿ ಎರಡೂವರೆ ವರ್ಷಗಳಷ್ಟೇ ಆಗಿದೆ ಮತ್ತು ಆ ಸಂದರ್ಭದಲ್ಲಿನ ವಿಷಯದ ಬಗ್ಗೆ ಮಾತ್ರ ನಾನು ಮಾತನಾಡಬಹುದು. ನನ್ನ ಪ್ರಕಾರ, ಆ ರಹಸ್ಯವೇನೆಂದರೆ ಅದು ಮಾತುಕತೆ. ಗಂಡ-ಹೆಂಡತಿ ಒಟ್ಟಿಗೆ ಕುಳಿತು, ಪರಸ್ಪರ ಒಂದಿಷ್ಟು ಸಮಯ ಕಳೆಯುವುದರ ಜತೆಗೆ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡರೆ, ಹಲವು ಸಮಸ್ಯೆಗಳು ಬಗೆಹರಿಯುತ್ತವೆ' ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ತಾನು ಸಹ ಪತಿಯ ಜತೆಗೆ ಕುಳಿತು ಹಲವು ವಿಷಯಗಳನ್ನು ಹಂಚಿಕೊಳ್ಳುವುದರಿಂದ, ತಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ.