ನಾನ್ಯಾವತ್ತೂ ಅವರನ್ನು ನೋಡೇ ಇಲ್ಲ ... ವದಂತಿಗಳಿಗೆ ತೆರೆ ಎಳೆದ ಕ್ರಿಸ್ಟೋಫರ್​

Prabhas - Christopher - Final
Published on

ಮುಂಬೈ: ಅದ್ಯಾರು ಇಂಥದ್ದೊಂದು ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ. ಒಟ್ಟಿನಲ್ಲಿ, ಟಾಮ್​ ಕ್ರೂಸ್​ ಅಭಿನಯದ 'ಮಿಷನ್​ ಇಂಪಾಸಿಬಲ್​ 7' ಚಿತ್ರದಲ್ಲಿ 'ಬಾಹುಬಲಿ' ಖ್ಯಾತಿಯ ಪ್ರಭಾಸ್​ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಮೊದಲು ಟಾಲಿವುಡ್​, ನಂತರ ಬಾಲಿವುಡ್​, ಈಗ ಹಾಲಿವುಡ್​ ... ತಮ್ಮ ನೆಚ್ಚಿನ ನಟ ಒಂದೊಂದೇ ಚಿತ್ರದ ಮೂಲಕ ಜಗತ್ಪ್ರಸಿದ್ಧರಾದರೆ, ಯಾವ ಅಭಿಮಾನಿಗಳಿಗೆ ತಾನೇ ಖುಷಿಯಾಗುವುದಿಲ್ಲ ಹೇಳಿ? ಪ್ರಭಾಸ್​ ಅಭಿಮಾನಿಗಳು ಸಹ ಖುಷಿಯಾಗಿದ್ದರು. ಆದರೆ, ಅವರ ಆಸೆಗೆ 'ಮಿಷನ್​ ಇಂಪಾಸಿಬಲ್​ 7' ಚಿತ್ರದ ನಿರ್ದೇಶಕ ತಣ್ಣೀರೆರಚಿದ್ದಾರೆ.

ಕಳೆದ ಕೆಲವು ದಿನಗಳಿಂದಲೂ 'ಮಿಷನ್​ ಇಂಪಾಸಿಬಲ್​ 7' ಚಿತ್ರದಲ್ಲಿ ಪ್ರಭಾಸ್​ ನಟಿಸುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಕೊನೆಗೆ ಕುತೂಹಲದ ತಡೆಯದ ಅಭಿಮಾನಿಯೊಬ್ಬರು, ಸೀದಾ ಚಿತ್ರದ ನಿರ್ದೇಶಕ ಕ್ರಿಸ್ಟೋಫರ್​ಗೆ ಮೆಕ್ವೆರಿಗೆ ಸಂದೇಶ ಕಳುಹಿಸಿದ್ದಾರೆ. ಈ ರೀತಿ ಸುದ್ದಿ ಓಡಾಡುತ್ತಿದೆಯಲ್ಲ, ಅದೇನು ನಿಜವಾ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಕ್ರಿಸ್ಟೋಫರ್​, 'ಪ್ರಭಾಸ್​ ಬಹಳ ಪ್ರತಿಭಾವಂತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ನಾನ್ಯಾವತ್ತೂ ಅವರನ್ನು ಭೇಟಿ ಸಹ ಆಗಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರದಲ್ಲಿ ಪ್ರಭಾಸ್​ ನಟಿಸುತ್ತಿರುವ ವಿಷಯವನ್ನು ಪರೋಕ್ಷವಾಗಿ ಅಲ್ಲಗೆಳೆದಿದ್ದಾರೆ.

'ಮಿಷನ್​ ಇಂಪಾಸಿಬಲ್​ 7' ಚಿತ್ರವು ಸದ್ಯ ಪ್ರೊಡಕ್ಷನ್​ ಹಂತದಲ್ಲಿದ್ದು, ಒಂದಿಷ್ಟು ಚಿತ್ರೀಕರಣ ಸಹ ಆಗಿದೆ. 'ಮಿಷನ್​ ಇಂಪಾಸಿಬಲ್​ - ರೋಗ್​ ನೇಷನ್​' ಮತ್ತು 'ಮಿಷನ್​ ಇಂಪಾಸಿಬಲ್​ - ಫಾಲ್​ಔಟ್​' ಚಿತ್ರಗಳನ್ನು ನಿರ್ದೇಶಿಸದ್ದ ಕ್ರಿಸ್ಟೋಫರ್​ ಮೆಕ್ವೆರಿ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, 2022ರ ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net