

ಕಲಬುರಗಿ: ರಾಜ್ಯದಲ್ಲಿ ಮತದಾನದ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಹೆಚ್ಚಾಗುತ್ತಿದೆ. ಎಲ್ಲೆಡೆ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕಾಂಗ್ರೆಸ್ನ ಪ್ರಿಯಾಂಕ ಖರ್ಗೆ ಅವರು ಪ್ರಚಾರದ ಕಡೆ ಹೆಚ್ಚು ಗಮನಹರಿಸಲಾಗದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.
ತಮ್ಮ ಧರ್ಮಪತ್ನಿ ಹಾಗೂ ಒಡಹುಟ್ಟಿದ ಸಹೋದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತ್ನಿ ಮತ್ತು ಸಹೋದರನ ಆರೋಗ್ಯ ವಿಚಾರಣೆಗಾಗಿ ಒಂದು ದಿನ ಆಸ್ಪತ್ರೆ ಮತ್ತೊಂದು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಸಂಕಷ್ಟದಲ್ಲಿದ್ದಾರೆ.
ಬ್ರೈನ್ ಟ್ಯೂಮರ್ ಪತ್ತೆ
ಚುನಾವಣೆ ಸಂಧರ್ಭದಲ್ಲಿ ಪ್ರಿಯಾಂಕ್ ಖರ್ಗೆ ಪತ್ನಿ, ಶೃತಿ ಪ್ರಿಯಾಂಕ್ ಖರ್ಗೆಗೆ ಬ್ರೈನ್ ಟ್ಯೂಮರ್ ಪತ್ತೆಯಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಶ್ರುತಿ ಖರ್ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮುಂಬೈ ಹಾಗೂ ಚಿತ್ತಾಪುರ ಪ್ರವಾಸದಲ್ಲೇ ಪ್ರಿಯಾಂಕ ಖರ್ಗೆ ಬಿಜಿಯಾಗಿದ್ದಾರೆ.
ಒಂದೆರೆಡು ದಿನ ಪತ್ನಿಯ ಆರೋಗ್ಯದ ಕಾಳಜಿ ವಹಿಸಿದ್ರೆ, ಮತ್ತೊಂದು ದಿನ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಈ ಬಾರಿ ಪ್ರಿಯಾಂಕ ಖರ್ಗೆಯನ್ನು ಗುರಿಯಾಗಿಸಿಕೊಂಡು ಸೋಲಿಸುವ ಯೋಜನೆ ರೂಪಿಸಿದ್ದಾರೆ.
ಪತ್ನಿಯ ಆರೋಗ್ಯ ದೃಷ್ಟಿಯಿಂದ ಪ್ರಿಯಾಂಕ ಖರ್ಗೆ ಅವರು ಕ್ಷೇತ್ರದಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಕಳೆದ ಎರಡ್ಮೂರು ದಿನದಿಂದ ನೋವಿನ ನಡುವೆಯು ಚಿತ್ತಾಪುರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪುತ್ರ ಪ್ರಿಯಾಂಕ ಖರ್ಗೆ ಗೇಲುವಿಗಾಗಿ ತಂದೆ ಮಲ್ಲಿಕಾರ್ಜುನ ಖರ್ಗೆ ಮೇ 6ರಂದು ತಂದೆ ಚಿತ್ತಾಪುರದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ರಾವೂರ್ ಮತ್ತು ದಂಡೋತ್ತಿ ಗ್ರಾಮದಲ್ಲಿ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. (ದಿಗ್ವಿಜಯ ನ್ಯೂಸ್)