

ಟೋಕಿಯೊ: ಚಂದಮಾಮನನ್ನು ನೋಡಿ ವಾವ್ ಎಂದು ಖುಷಿ ಪಟ್ಟಿದ್ದೀರೇ? ನಾವೂ ಅಲ್ಲಿಗೆ ಹೋಗಬಹುದೇ ಎಂದು ಯೋಚಿಸಿದ್ದೀರೇ? ಹಾಗಿದ್ದರೆ ನಿಮಗೆ ಇಲ್ಲಿದೆ ಬಹುದೊಡ್ಡ ಅವಕಾಶ. ಅವಕಾಶದ ಜತೆ ಟ್ಯಾಲೆಂಟ್ ಇದ್ದರೆ ನೀವೂ ಚಂದ್ರನ ಮೇಲೆ ಹೋಗಬಹುದು.
ಹೌದು ಅಂತದ್ದೊಂದು ಅದ್ಭುತ ಅವಕಾಶವನ್ನು ಜಪಾನ್ನ ಕೋಟ್ಯಾಧೀಶ್ವರ ನಿಮಗೆ ಕೊಡುತ್ತಿದ್ದಾನೆ. ಆತ 2023ರಲ್ಲಿ ಚಂದ್ರನ ಸುತ್ತಲು ಹೋಗಲಿದ್ದಾನೆ. ಒಬ್ಬನೇ ಹೋಗುವ ಬದಲು ಪ್ರಪಂಚದ ಮೂಲೆ ಮೂಲೆಗಳಿಂದ ಎಂಟು ಮಂದಿಯನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದಾನೆ. ಅದಕ್ಕೆ ಯಾರಾದರೂ ಅರ್ಜಿ ಸಲ್ಲಿಸಬಹುದು ಎಂದು ಆತ ಹೇಳಿದ್ದಾನೆ.
ಸ್ಪೇಸ್ಎಕ್ಸ್ ಸಂಸ್ಥೆಯು 2023ರಲ್ಲಿ ಸಾಮಾನ್ಯ ಜನರನ್ನು ಚಂದ್ರನಲ್ಲಿಗೆ ಕರೆದುಕೊಂಡು ಹೋಗುವುದಾಗಿ 2018ರಲ್ಲಿ ಘೋಷಿಸಿತ್ತು. ಆ ಘೋಷಣೆ ಆದ ತಕ್ಷಣವೇ ಜಪಾನ್ನ ಆನ್‌ಲೈನ್ ಫ್ಯಾಶನ್ ಉದ್ಯಮಿ ಯುಸಾಕು ಮೇಜಾವಾ, ತನ್ನ ಸೀಟನ್ನು ಕಾಯ್ದಿರಿಸಿಕೊಂಡಿದ್ದಾರೆ. ಇದೀಗ ಆ ಕುರಿತಾಗಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ನಾನು ಒಂಬತ್ತು ಸೀಟುಗಳನ್ನು ಕಾಯ್ದರಿಸಿದ್ದೇನೆ. ಕಲಾವಿದರನ್ನು ಕರೆದುಕೊಂಡು ಹೋಗೋಣ ಎಂದು ಮೊದಲು ನಿರ್ಧರಿಸಿದ್ದೆ. ಆದರೆ ಸೃಜನಾತ್ಮಕವಾಗಿ ಏನನ್ನಾದರೂ ಮಾಡುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಕಲಾವಿದ ಎಂದು ಕರೆಯಬಹುದು ಎನ್ನುವುದು ಈಗ ನನ್ನ ಅರಿವಿಗೆ ಬಂದಿದೆ. ಹಾಗಾಗಿ ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರು ಇದಕ್ಕೆ ಅರ್ಜಿ ಹಾಕಬಹುದು ಎಂದು ಅವರು ಹೇಳಿಕೊಂಡಿದ್ದಾರೆ. ಇದೊಂದು ಖಾಸಗಿ ಪ್ರಯಾಣವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಆನ್‌ಲೈನ್ ಅರ್ಜಿ ಸಲ್ಲಿಸಲು ಮಾರ್ಚ್ 14ರವರೆಗೆ ಸಮಯಾವಕಾಶ ನೀಡಲಾಗಿದೆ. ಆರಂಭಿಕ ಸ್ಕ್ರೀನಿಂಗ್ ಅನ್ನು ಮಾರ್ಚ್ 21 ರೊಳಗೆ ನಡೆಸಲಾಗುತ್ತದೆ. ಅದಾದ ನಂತರ ಅಸೈನ್ಮೆಂಟ್ ಮತ್ತು ಆನ್‌ಲೈನ್ ಇಂಟರ್ವ್ಯೂ ಇರಲಿದೆ. ಕೊನೆಯ ಹಂತವಾಗಿ 2021ರ ಮೇ ತಿಂಗಳ ಕೊನೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುವುದು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ