

| ಕೀರ್ತಿನಾರಾಯಣ ಸಿ. ಬೆಂಗಳೂರು
ಜಗತ್ತನ್ನೇ ಕಂಗೆಡಿಸಿರುವ ಕರೊನಾ ಮಾರಿ ಜೈಲೊಳಗಿರುವ ಕೈದಿಗಳನ್ನೂ ಮಾನಸಿಕವಾಗಿ ಹಿಂಡಲಾರಂಭಿಸಿದೆ. ಕೋವಿಡ್ ಲಾಕ್ಡೌನ್ನಿಂದಾಗಿ ಸಜಾಬಂಧಿಗಳು ಹಾಗೂ ಜೈಲು ಸಿಬ್ಬಂದಿ ಮಾನಸಿಕ ಖಿನ್ನತೆಗೆ ಜಾರಿರುವ ವಿಚಾರ ನಿಮ್ಹಾನ್ಸ್ ಸಮೀಕ್ಷೆಯಲ್ಲಿ ಬಯಲಾಗಿದೆ. ಮನೋವೇದನೆಗೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರದಿಂದ ದೂರವಿರಿಸಲು ನಿಮ್ಹಾನ್ಸ್ ಸಿದ್ಧಪಡಿಸಿರುವ ಸರಳಸೂತ್ರಗಳ ಕೈಪಿಡಿಯನ್ನು ದೇಶದ ಎಲ್ಲ ಜೈಲುಗಳಿಗೂ ಕಳುಹಿಸಿ ಅದರ ಮಾರ್ಗಸೂಚಿಯನ್ನು ಕೈದಿಗಳಿಗೆ ಕಡ್ಡಾಯವಾಗಿ ಹೇಳಿಕೊಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
‘ಡೀಲಿಂಗ್ ವಿತ್ ಮೆಂಟಲ್ ಹೆಲ್ತ್ ಇಶ್ಯೂಸ್ ಇನ್ ಪ್ರಿಸನರ್ಸ್ ಡೂರಿಂಗ್ ಕೋವಿಡ್-19’ ಮತ್ತು ‘ಡೀಲಿಂಗ್ ವಿತ್ ಮೆಂಟಲ್ ಹೆಲ್ತ್ ಇಶ್ಯೂಸ್ ಇನ್ ಪ್ರಿಸನ್ ಸ್ಟಾಫ್ ಡೂರಿಂಗ್ ಕೋವಿಡ್-19’ ಶೀರ್ಷಿಕೆಯ ಎರಡು ಕೈಪಿಡಿಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಸಿದ್ಧಪಡಿಸಿದ್ದು, ಅಯಾ ಸ್ಥಳೀಯ ಭಾಷೆಗಳಿಗೆ ಅನುವಾದಿಸಿ ಕೈದಿಗಳಿಗೆ ಹೇಳಿಕೊಡುವಂತೆ ಕಾರಾಗೃಹ ಇಲಾಖೆಗಳಿಗೆ ಕೇಂದ್ರ ಸೂಚಿಸಿದೆ. ಕೋವಿಡ್ನಿಂದಾಗಿ ಪಾಶ್ಚಿಮಾತ್ಯ ದೇಶಗಳ ಕಾರಾಗೃಹಗಳಲ್ಲಿರುವ 10 ವಯಸ್ಕ ಕೈದಿಗಳ ಪೈಕಿ ನಾಲ್ವರಲ್ಲಿ ಆತಂಕ ಮತ್ತು ಖಿನ್ನತೆ ಲಕ್ಷಣಗಳಿರುವುದು ಕಂಡುಬಂದಿದೆ. ಭಾರತದ ಜೈಲುಗಳಲ್ಲಿರುವ ಕೈದಿಗಳಲ್ಲೂ ಖಿನ್ನತೆ ಹೆಚ್ಚುತ್ತಿದೆ. ಬೆಂಗಳೂರು ಕಾರಾಗೃಹ ಕೈದಿಗಳ ಮಾನಸಿಕ ಆರೋಗ್ಯ ಅಧ್ಯಯನದ ಪ್ರಕಾರ ಜೈಲಿನ ಒಟ್ಟಾರೆ ಕೈದಿಗಳ ಪೈಕಿ ಶೇ.80 ಸಜಾಬಂಧಿಗಳಲ್ಲಿ ಮಾನಸಿಕ ಅಸ್ವಸ್ಥತೆ ಹಾಗೂ ಮಾದಕ ವ್ಯಸನದ ಸಮಸ್ಯೆ ಇದೆ. ಮಾದಕ ದ್ರವ್ಯ ಬಳಕೆ ಹೊರತುಪಡಿಸಿದರೂ ಶೇ.27.6 ಕೈದಿಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ.
15 ನಿಮಿಷ ಯೋಗ: ಯಾವುದೇ ಸಂದರ್ಭದಲ್ಲಾದರೂ ಸರಿ ದಿನಕ್ಕೆ 2 ಬಾರಿ 15 ನಿಮಿಷ ಯೋಗ ಮಾಡಿದರೆ ಮಾನಸಿಕ ಖಿನ್ನತೆ ದೂರಾಗುತ್ತದೆ ಎಂದು ನಿಮ್ಹಾನ್ಸ್ ಕೈಪಿಡಿಯಲ್ಲಿ ಹೇಳಲಾಗಿದೆ. ಅರ್ಧ ಚಕ್ರಾಸನ, ಭ್ರಮರಿ, ನಾಡಿಶುದ್ಧಿ, ಭುಜ, ಕುತ್ತಿಗೆ ಮತ್ತು ಕೈ ತಿರುಗಿಸುವ ಯೋಗಾಸನಗಳನ್ನು 15 ನಿಮಿಷ ಮಾಡುವಂತೆ ಸೂಚಿಸಲಾಗಿದೆ.