ನವದೆಹಲಿ: ಕೇಂದ್ರ ಸರ್ಕಾರ ಪ್ರಾಯೋಜಿತ ಪಿಎಂ ಇ-ಡ್ರೖೆವ್ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ಹಂಚಿಕೆ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಚ್ಡಿಕೆ, ವಿದ್ಯುತ್ ಚಾಲಿತ ಬಸ್ಗಳ ಹಂಚಿಕೆ ಈಗಾಗಲೇ ನಡೆಯುತ್ತಿದ್ದು, ಕರ್ನಾಟಕಕ್ಕೆ ಹಂತಹಂತವಾಗಿ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಾರಿಗೆ ವ್ಯವಸ್ಥೆಯಲ್ಲಿ, ಅದರಲ್ಲೂ ನಗರಗಳಲ್ಲಿ ವಾಹನಮಾಲಿನ್ಯವನ್ನು ಶೂನ್ಯಕ್ಕೆ ಇಳಿಸಲು ದೇಶಾದ್ಯಂತ 9 ಪ್ರಮುಖ ನಗರಗಳಿಗೆ 14,000 ವಿದ್ಯುತ್ ಚಾಲಿತ ಬಸ್ಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ 2 ವರ್ಷಗಳಲ್ಲಿ 10,900 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ಕರ್ನಾಟಕಕ್ಕೆ ಖಂಡಿತವಾಗಿಯೂ ಹೆಚ್ಚು ಬಸ್ಗಳನ್ನು ಒದಗಿಸಲಾಗುವುದು. ಚಾರ್ಜಿಂಗ್ ಸ್ಟೇಷನ್ಗಳು, ಬಸ್ ಡಿಪೋಗಳು, ವಾಹನ ನಿರ್ವಹಣಾ ವ್ಯವಸ್ಥೆ ಮತ್ತಿತರ ಮೂಲಸೌಕರ್ಯ ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಚರ್ಚೆ ನಡೆಯುತ್ತಿದೆ. ತ್ವರಿತ ಅನುಷ್ಠಾನಕ್ಕಾಗಿ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಗೋಧಿ ಖರೀದಿ ಹೆಚ್ಚಳ
ನವದೆಹಲಿ: ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (2025-26) ಈವರೆಗೆ 28.66 ದಶಲಕ್ಷ ಟನ್ ಗೋಧಿ ಖರೀದಿಸಲಾಗಿದ್ದು, ಇದು ಕಳೆದ ವರ್ಷ ಖರೀದಿಸಿದ್ದಕ್ಕಿಂತ ಹೆಚ್ಚಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. 2022-23ರ ಮಾರುಕಟ್ಟೆ ವರ್ಷದ ನಂತರದ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಖರೀದಿ ಇದಾಗಿದೆ. ಪ್ರಸಕ್ತ ವರ್ಷ 115.3 ದಶಲಕ್ಷ ಟನ್ ಗೋಧಿ ಉತ್ಪಾದನೆ ಆಗಲಿದೆ ಎಂದು ಅಂದಾಜಿಸಲಾಗಿದೆ. 2024-25ರ ಮಾರುಕಟ್ಟೆ ವರ್ಷದಲ್ಲಿ ಒಟ್ಟಾರೆ ಗೋಧಿ ಖರೀದಿ 26.59 ದಶಲಕ್ಷ ಟನ್ ಆಗಿತ್ತು. ಗೋಧಿ ಮಾರುಕಟ್ಟೆ ವರ್ಷವು ಏಪ್ರಿಲ್ನಿಂದ ಮಾರ್ಚ್ವರೆಗೆ ಇರುತ್ತದೆ. ಮೊದಲ ಮೂರು ತಿಂಗಳಲ್ಲಿಯೇ ಹೆಚ್ಚಿನ ಖರೀದಿ ನಡೆಯುತ್ತದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಆಹಾರ ನಿಗಮ (ಎಫ್ಸಿಐ) ಮತ್ತು ರಾಜ್ಯದ ಸಂಸ್ಥೆಗಳು ಸೇರಿ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿ ಕೇಂದ್ರದ ಉಗ್ರಾಣಕ್ಕೆ ಕಳಿಸುತ್ತವೆ. ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಾದ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಗೋಧಿ ಖರೀದಿಸಿವೆ.