ಬೆಂಗಳೂರು: ರಾಜ್ಯದಲ್ಲಿರುವ ಸುಮಾರು 36 ಸಾವಿರ ಸಿ.ದರ್ಜೆ ದೇವಾಲಯಗಳ ಅಭಿವೃದ್ಧಿಗಾಗಿ ಬಹುದಿನಗಳಿಂದ ಇದ್ದ ಬೇಡಿಕೆಯನ್ನು ಪುರಸ್ಕರಿಸಿ ಸರ್ಕಾರ ತಂದಿರುವ ಮುಜರಾಯಿ ಕಾಯ್ದೆ ತಿದ್ದುಪಡಿ ಬಿಲ್‌ನ್ನು ರಾಜ್ಯಪಾಲರು ಕೂಡಲೇ ಅನುಮೋದಿಸುವಂತೆ ಅಖಿಲ ಕರ್ನಾಟಕ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರೊ.ಕೆ.ಈ.ರಾಧಾಕೃಷ್ಣ, ಕಳೆದ 10 ವರ್ಷಗಳಿಂದ ಸಿ ದರ್ಜೆ ದೇವಾಲಯಗಳ ಅರ್ಚಕರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ದೇವಾಲಯಗಳ ಅಭಿವೃದ್ಧಿ ಹಾಗೂ ಸರಾಗ ಪೂಜೆ–ಪುನಸ್ಕಾರಕ್ಕೆ ಅನುವು ಮಾಡಿಕೊಡುವಂತೆ ಸರ್ಕಾರವನ್ನು ಆಗ್ರಹಿಸುತ್ತಾ ಬಂದಿದ್ದಾರೆ. ಒಕ್ಕೂಟದ ಆಗ್ರಹಕ್ಕೆ ಸ್ಪಂದಿಸಿ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ಕಳೆದ ಅಧಿವೇಶನದಲ್ಲಿ ಮುಜರಾಯಿ ಕಾಯ್ದೆಗೆ ತಿದ್ದುಪಡಿಯನ್ನು ಮಾಡಿ ಬಿಲ್ ಮಂಡಿಸಿದ್ದರು. ಉಭಯ ಸದನಗಳಲ್ಲಿ ಎಲ್ಲ ಪಕ್ಷಗಳು ಸರ್ವಾನುಮತದಿಂದ ಈ ಬಿಲ್‌ನ್ನು ಸ್ವಾಗತಿಸಿದ್ದು, ನೂತನ ತಿದ್ದುಪಡಿಯಾದ ಕಾಯ್ದೆಗೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಸರ್ಕಾರ ಕಳುಹಿಸಿದೆ. ಆದರೆ ಘನತೆವೆತ್ತ ರಾಜ್ಯಪಾಲರು ರಾಜಕೀಯ ರಹಿತವಾದ ಈ ಕಾಯ್ದೆಯನ್ನು ವಿನಾಕಾರಣ ಅನುಮೋದನೆ ನೀಡದೆ ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಈ ಬಗ್ಗೆ ಒಕ್ಕೂಟದ ನೇತೃತ್ವದಲ್ಲಿ ನಿಯೋಗವನ್ನು ಕೊಂಡೊಯ್ದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಕೂಡಲೇ ರಾಜ್ಯಪಾಲರು ಅಂಕಿತವನ್ನು ಹಾಕಿ ಕಾಯ್ದೆಯ ಅನುಷ್ಠಾನಕ್ಕೆ ಅನುವು ಮಾಡಿಕೊಡಬೇಕು ಎಂದು ಪ್ರೊ.ರಾಧಾಕೃಷ್ಣ ಒತ್ತಾಯಿಸಿದರು.
ಎ ಮತ್ತು ಬಿ ದರ್ಜೆ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕರಿಗೆ ಹೆಚ್ಚಿನ ಸಮಸ್ಯೆಗಳಿಲ್ಲ. ಆದರೆ ಸಿ ದರ್ಜೆ ದೇವಾಲಯಗಳಲ್ಲಿ ಸರಿಯಾಗಿ ಎರಡು ಹೊತ್ತು ಪೂಜೆ ಮಾಡುವುದಕ್ಕೂ ಅರ್ಚಕರಿಗೆ ಕಷ್ಟವಿದೆ. ಆದ್ದರಿಂದ ಇದೀಗ ತಿದ್ದುಪಡಿಯಾಗಿರುವ ಕಾಯ್ದೆಯಿಂದ ಎ ಮತ್ತು ಬಿ ದರ್ಜೆಯ ದೇವಾಲಯಗಳ ಎಲ್ಲ ಖರ್ಚು–ವೆಚ್ಚಗಳನ್ನು ಪೂರೈಸಿ ಉಳಿದ ಹಣದ ಶೇ.10ನ್ನು ಸಿ.ದರ್ಜೆ ದೇವಾಲಯಗಳ ಅಭಿವೃದ್ಧಿಗೆ ಬಳಸಲು ಅವಕಾಶವಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಶಾಮಾಚಾರ್, ಉಮೇಶ ಶರ್ಮ, ಗಾಯಿತ್ರಿ ಮತ್ತಿತರರಿದ್ದರು.
ಗ್ರಾಮೀಣ ದೇವಾಲಯಗಳಲ್ಲಿ ಆಸ್ತಿ ರಕ್ಷಿಸಿ
ಸಿ.ದರ್ಜೆ ದೇವಾಲಯಗಳು ಲಕ್ಷಾಂತರ ಎಕರೆ ಭೂಮಿಯನ್ನು ಕಳೆದುಕೊಂಡಿವೆ. ಇರುವ ಭೂಮಿಯನ್ನು ದಶಕಗಳಿಂದ ಪ್ರಭಾವಿ ವ್ಯಕ್ತಿಗಳು ಲೀಸ್ ಮೇಲೆ ಬಳಸಿಕೊಳ್ಳುತ್ತಿದ್ದಾರೆ. ಆ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒಕ್ಕೂಟದ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಆಗ್ರಹಿಸಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಸ್ಥಳೀಯ ನಾಯಕರು ದೇವರ ಪೂಜೆ ವಿಷಯದಲ್ಲಿ ಅರ್ಚಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇತ್ತೀಚೆಗೆ ಅಂತಹ ದೌರ್ಜನ್ಯದಿಂದ ಬೇಸೆತ್ತು ಹಾಸನ ಜಿಲ್ಲೆಯಲ್ಲಿ ಓರ್ವ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮುಜರಾಯಿ ದೇವಾಲಯಗಳನ್ನು ಖಾಸಗಿಗೊಳಿಸಬೇಕೆಂಬ ಪೇಜಾವರ ಶ್ರೀಗಳ ಹೇಳಿಕೆ ಅಪ್ರಸ್ತುತ ಮತ್ತು ಅವರ ಅಜ್ಞಾನವನ್ನು ತೋರ್ಪಡಿಸುತ್ತದೆ. ದೇವಾಲಯಗಳ ಸಂಪನ್ಮೂಲ ಮತ್ತು ಪರಂಪರೆಯನ್ನು ವರ್ಗಾಯಿಸುವುದು ಸಾಧ್ಯವಿಲ್ಲದ ಮಾತು. ಇದರಿಂದ ಅರ್ಚಕರ ಬದುಕಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಶ್ರೀಗಳು ತಮ್ಮ ಹೇಳಿಕೆ ಹಿಂಪಡೆಯಬೇಕು.
–ಪ್ರೊ.ಕೆ.ಇ.ರಾಧಾಕೃಷ್ಣ, ಒಕ್ಕೂಟದ ಅಧ್ಯಕ್ಷ
ದೇಶದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ಪ್ರಮುಖ; ಡಾ.ಸಿ.ಎನ್.ಮಂಜುನಾಥ ಅಭಿಮತ