ದೇಶದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ಪ್ರಮುಖ; ಡಾ.ಸಿ.ಎನ್.ಮಂಜುನಾಥ ಅಭಿಮತ

rotary
Published on

ಬೆಂಗಳೂರು: ದೇಶದ ಪ್ರಗತಿಯಲ್ಲಿ ರೋಟರಿಯನ್‌ಗಳು, ಉದ್ಯಮಿಗಳು ತಮ್ಮ ದುಡಿಮೆಯ ಹಣವನ್ನು ಸಮಾಜಮುಖಿ ಸೇವೆಗೆ ವಿನಿಯೋಗಿಸಿ ರಾಷ್ಟ್ರದ ಅಭಿವೃದ್ದಿ, ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸಮಾಜ ಸುಧಾರಣೆ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಅಭಿವೃದ್ಧಿಗೆ ಆರೋಗ್ಯ, ಶಿಕ್ಷಣ, ನೀರಾವರಿಯ ಯೋಜನೆಗಳಿಗೆ ಮಹತ್ವ ಹೆಚ್ಚು. ಅಂತಹ ಎಲ್ಲ ಯೋಜನೆ ರೂಪಿಸಲು ಜನರು ನೀಡುವ ತೆರಿಗೆ ಹಣವೇ ಆಧಾರ. ಬೆಂಗಳೂರಿನ ಉದ್ಯಮಿಗಳು ಪ್ರತಿ ತಿಂಗಳು 2 ಲಕ್ಷ ಕೋಟಿ ಜಿಎಸ್‌ಟಿ ಪಾವತಿ ಮಾಡುವ ಮೂಲಕ ತಮ್ಮ ಸಂಸ್ಥೆ, ಪ್ಯಾಕ್ಟರಿಗಳಲ್ಲಿ ಕಷ್ಟಪಟ್ಟು ಯಶಸ್ಸು ಮತ್ತು ಶ್ರೇಯಸನ್ನು ಗಳಿಸಿ, ಬಡವರ ಸೇವೆ ಮಾಡುವ ಹೃದಯವಂತಿಕೆಯನ್ನು ಮೆರೆದಿದ್ದಾರೆ. ಭಾರತವು ಉದ್ಯೋಗ ನೀಡುವಲ್ಲಿ, ರಕ್ಷಣೆಯ ಉಪಕರಣಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಬೆಂಗಳೂರಿನ ಉದ್ಯಮಿಗಳ ಪಾತ್ರ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಕಿಲ್ ಪ್ರಾಜೆಕ್ಟೃ್ ಟಾಟಾ ಸಂಸ್ಥೆಯ ಮಾರ್ಗದರ್ಶಕರಾದ ಎಚ್.ಎನ್.ಶ್ರೀನಿವಾಸ್, ಅಂತರಾಷ್ಟ್ರೀಯ ರೋಟರಿ ನಿರ್ದೇಶಕರಾದ ವಿ.ಶ್ರೀನಿವಾಸಮೂರ್ತಿ, ಕೆ.ಪಿ.ನಾಗೇಶ್, ಕಾರ್ಯದರ್ಶಿ ಎಸ್.ನಾಗೇಂದ್ರ, ಶಿವ್ ಮಾತನ್, ಶೀತಲ್ ಕುಮಾರ್, ರೋಟರಿ ಜಿಲ್ಲಾ ಪ್ರಚಾರ ಸಮಿತಿಯ ನಿರ್ದೇಶಕ ಕೆ.ಟಿ.ನಿರಂಜನ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net