

ಪುತ್ತೂರು ಗ್ರಾಮಾಂತರ: ಧಾರ್ಮಿಕ ವೈದಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುರೋಹಿತರೊಬ್ಬರು ಅನಾರೋಗ್ಯ ಹಿನ್ನೆಲೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ.
ಕುರಿಯ ಗ್ರಾಮದ ಕೈಂತಿಲ ನಿವಾಸಿ ಸುರೇಶ್ ನಕ್ಷತ್ರಿತ್ತಾಯ(58) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಮಧ್ಯಾಹ್ನ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿರುವ ತನ್ನ ಹಳೆಯ ಮನೆಗೆ ಪಂಪ್ ಸ್ವಿಚ್ ಹಾಕಿ ಟ್ಯಾಂಕ್ಗೆ ನೀರು ತುಂಬಿಸಿ ಬರುವುದಾಗಿ ಹೇಳಿ ಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಪುತ್ರ ಹುಡುಕಾಡಿದಾಗ ಮನೆಯ ಕೋಣೆಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದಿರುವುದು ಕಂಡು ಬಂದಿತ್ತು.
ಅವರು ಎರಡೂವರೆ ತಿಂಗಳಿನಿಂದೀಚೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಔಷಧ ಪಡೆದರೂ ಗುಣಮುಖರಾಗಿರಲಿಲ್ಲ. ಅನಾರೋಗ್ಯದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿರುವುದಾಗಿ ಪತ್ನಿ ರಾಧಿಕಾ ಸಂಪ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ವಿದ್ಯಾಪೀಠದಲ್ಲಿ ಪೌರೋಹಿತ್ಯ ಶಿಕ್ಷಣ ಪಡೆದಿದ್ದ ಸುರೇಶ್ ನಕ್ಷತ್ರಿತ್ತಾಯ, ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ ಸೇರಿದಂತೆ ಹಲವು ಕಡೆಗಳಲ್ಲಿ ವೈದಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹಲವು ಮಂದಿ ಶಿಷ್ಯವರ್ಗವನ್ನು ಹೊಂದಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.