ಅಗ್ರಿಗೇಟರ್​ ಕಂಪನಿಗಳಿಂದ ದರ ಸುಲಿಗೆ: ಪಿಕ್​ ಅವರ್​ನಲ್ಲಿ ಮನಸೋಇಚ್ಛೆ ಹಣ ನಿಗದಿ

auto
Published on

ಬೆಂಗಳೂರು:ರಾಜಧಾನಿಯಲ್ಲಿ ಓಲಾ, ಊಬರ್​, ರ್ಯಾಪಿಡೋ ಹಾಗೂ "ನಮ್ಮ ಯಾತ್ರಿ' ಇತ್ಯಾದಿ ಆ್ಯಪ್​ ಆಧಾರಿತ ಅಗ್ರಿಗೇಟರ್​ ಕಂಪನಿಗಳು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಅಧಿಕ ದರವನ್ನು ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿವೆ.

ಪೀಕ್​ ಅವರ್​ನಲ್ಲಿ ಯದ್ವಾತದ್ವಾ ದರ ನಮೂದಿಸುತ್ತಿರುವ ಬಗ್ಗೆ ಸಾರಿಗೆ ಇಲಾಖೆ ಕೆಲವೊಮ್ಮೆ ಎಚ್ಚರಿಕೆ ನೀಡಿದ್ದಾಗ ಅಗ್ರಿಗೇಟರ್​ ಕಂಪನಿಗಳು ಒಂದೆರಡು ದಿನ ಮಾತ್ರ ಸರ್ಕಾರ ನಿಗದಿಪಡಿಸಿದ ದರವನ್ನು ನಮೂದಿಸುತ್ತಿವೆ. ಬಳಿಕ, 1 ಅಥವಾ 2 ಪಟ್ಟು ಅಧಿಕವಾಗಿ ನಮೂದಿಸಿ ವಸೂಲಿ ಮಾಡುತ್ತಿವೆ. ಅಲ್ಲದೆ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಹೊರತುಪಡಿಸಿ ನಗರದ ವಿವಿಧ ಕಡೆಗಳಲ್ಲಿ ಪ್ರೀಪೇಡ್​ ಆಟೋ ಸೇವೆಯೇ ಇಲ್ಲದಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಡ್​ ಆಟೋ ಸೇವೆ ಇದ್ದರೂ ಪ್ರಯಾಣಿಕರಿಗೆ ಸದ್ಬಳಕೆಯಾಗುತ್ತಿಲ್ಲ. ಪ್ರೀಪೇಡ್​ ಬೂತ್​ಗಳ ಮುಂಭಾಗ ಬೆರಳಣಿಕೆಯ ಆಟೋಗಳು ಇರುತ್ತವೆ.

ಸಿಲಿಕಾನ್​ ಸಿಟಿಯಲ್ಲಿ ಅಂದಾಜು 2.5 ಲಕ್ಷಕ್ಕೂ ಅಧಿಕ ಆಟೋಗಳಿವೆ. ಆ್ಯಪ್​ ಆಧಾರಿತ ಸೇವೆಗೆ ಸರ್ಕಾರ ಅನುಮತಿ ಕೊಟ್ಟಿದೆ. ಆ್ಯಪ್​ನಲ್ಲಿ ಬುಕಿಂಗ್​ ಸೇವೆ ಒದಗಿಸುವ ಅಗ್ರಿಗೇಟರ್​ ಕಂಪನಿಗಳಿಗೆ ಇಂತಿಷ್ಟು ದರ ನಿಗದಿಪಡಿಸಲಾಗಿದೆ. ಈ ಹಿನ್ನೆಲೆ ಓಲಾ, ಊಬರ್​, ರ್ಯಾಪಿಡೋ ಹಾಗೂ "ನಮ್ಮ ಯಾತ್ರಿ' ಇತ್ಯಾದಿ ಅಗ್ರಿಗೇಟರ್​ ಆ್ಯಪ್​ಗಳಲ್ಲಿ ಪ್ರಯಾಣಿಕರಿಗೆ ಬುಕಿಂಗ್​ ಸೇವೆ ಕಲ್ಪಿಸುತ್ತಿವೆ. ಚಾಲಕರು ದುಬಾರಿ ಬೆಲೆ ಕೇಳುವುದು ಮತ್ತು ನಿಗದಿತ ಸ್ಥಳಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ರಾಜಧಾನಿಯ ಬಹುತೇಕ ಜನರು ಆ್ಯಪ್​ನಲ್ಲಿ ಆಟೋರೀಕ್ಷಾ ಬುಕಿಂಗ್​ ಮಾಡುತ್ತಾರೆ. ಈ ಸೇವೆ ಚೆನ್ನಾಗಿದ್ದರೂ ಪರಿಸ್ಥಿತಿಯ ಲಾಭ ಪಡೆದು ನಿಯಮಬಾಹಿರವಾಗಿ ಅಡ್ಡದಾರಿಯಲ್ಲಿ ಹಣ ಗಳಿಸುತ್ತಿವೆ.

ಡಿಜಿಟಲ್​ ಮೀಟರ್​ ಹಾಕುತ್ತಿಲ್ಲ:

ನಗರದಲ್ಲಿನ ಆಟೋಗಳಿಗೆ ಮೀಟರ್​ ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿ ಪ್ರತಿ ಎರಡು ಕಿಮೀಗೆ 30 ರೂ. ದರ ನಿಗದಿಪಡಿಸಿದೆ. ಆದರೆ, ನಗರದಲ್ಲಿರುವ ಒಟ್ಟು ಆಟೋಗಳ ಪೈಕಿ ಶೇ.70 ಆಟೋಗಳು ಆ್ಯಪ್​ ಆಧಾರಿತ ಸೇವೆ ನೀಡುತ್ತಿದ್ದು, ಡಿಜಿಟಲ್​ ಮೀಟರ್​ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಬಹುತೇಕ ಆಟೋಗಳಿಗೆ ಮೀಟರ್​ ಇದ್ದರೂ ಹಾಕುತ್ತಿಲ್ಲ. ಕೆಲ ಸಂದರ್ಭದಲ್ಲಿ ಮೀಟರ್​ ದರಕ್ಕಿಂತ ಹೆಚ್ಚುವರಿಯಾಗಿ 10 ಅಥವಾ 20 ರೂ.ಗಾಗಿ ಗೋಗರೆಯುವುದು ಸಾಮಾನ್ಯವಾಗಿದೆ.

ಕಿತ್ತಾಟ ಸಾಮಾನ್ಯ: 

ಪ್ರತಿನಿತ್ಯ ಆ್ಯಪ್​ ಆಧಾರಿತ ಆಟೋಗಳ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ವಾಗ್ವಾದ ನಡೆಯುತ್ತಿವೆ. ಕೆಲವೊಮ್ಮೆ ಚಾಲಕರು ಪ್ರಯಾಣಿಕರ ಜೊತೆ ದುಂಡಾವರ್ತನೆ ತೋರುತ್ತಿರುವ ಟನೆಗಳು ಅಗಾಗ್ಗೆ ಸಂಭವಿಸುತ್ತಿವೆ. ಪೀಕ್​ ಅವರ್​ ಅಥವಾ ಮಳೆ ಬಂದಾಗ ಆ್ಯಪ್​ನಲ್ಲಿ ನಿಗದಿಗಿಂತ ಮೂರು ಪಟ್ಟು ಅಧಿಕ ದರ ತೋರಿಸುತ್ತದೆ. ಕೆಲವೊಮ್ಮೆ ಬುಕಿಂಗ್​ ಮಾಡಿದಾಗ 200 ರೂ. ಅಸುಪಾಸಿನಲ್ಲಿ ತೋರಿಸುವ ದರ, ಆಟೋ ಇಳಿದಾಗ 230&250 ರೂ.ಗೆ ವೃದ್ಧಿಯಾಗುತ್ತದೆ. ಚಾಲಕರು ಈ ಬಗ್ಗೆ ದೂರು ದಾಖಲಿಸಲು ಆ್ಯಪ್​ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಬರೀ ಕಮಿಷನ್​ಗಾಗಿ ಸೇವೆ ನೀಡುತ್ತಿರುವ ಅಗ್ರಿಗೇಟರ್​ ಆ್ಯಪ್​ಗಳು, ತಡವಾಗಿ ಆಟೋ ಬರಲಿದೆ ಎಂಬ ಕಾರಣಕ್ಕಾಗಿ ಟ್ರಿಪ್​ ಕ್ಯಾನ್ಸಲ್​ ಮಾಡಿದರೆ ಪ್ರಯಾಣಿಕರಿಗೆ 20 ರೂ. ದಂಡ ವಿಧಿಸುತ್ತಿವೆ. 2&3 ಕಿಮೀಗೆ 100 ರೂ. ದರ ನಿಗದಿಪಡಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net