ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಧರ್ಮದ ಆಧಾರದಲ್ಲಿ ಮೀಸಲಾತಿ ದೇಶ ಒಡೆಯಲು ಕಾರಣವಾಗಲಿದೆ. ಸಿದ್ದರಾಮಯ್ಯ ಅವರ ಈ ಬಾರಿಯ ಬಜೆಟ್ ಹಲಾಲ್ ಮಾತ್ರವಲ್ಲದೆ ದಲಾಲ್ ಕೂಡ ಆಗಿದೆ. ಸರ್ಕಾರಿ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ.4ರಷ್ಟು ಮೀಸಲಾತಿ ನೀಡಿರುವುದನ್ನು ಜಿಜೆಪಿ ವಿರೋಧಿಸುತ್ತದೆ ಮಾತ್ರವಲ್ಲದೆ ಅದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ಮಂಗಳವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಸರ್ಕಾರ 1.6 ಲಕ್ಷ ಕೋಟಿ ರೂ. ಸಾಲ ತೆಗೆದುಕೊಳ್ಳುವಂತಹ ಅನಿವಾರ್ಯತೆಗೆ ಬಂದಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗುವಾಗ ಮಿಗತೆ ಬಜೆಟ್ ಇತ್ತು. ಸಿದ್ದರಾಮಯ್ಯನವರ ಮೂರು ಬಜೆಟ್ ಕೊರೆತೆಯದ್ದೇ ಆಗಿವೆ. ಈಗಿನ ಸರ್ಕಾರದಲ್ಲಿ ಹುಟ್ಟುವ ಮಗು 1 ಲಕ್ಷ ಸಾಲ ಇಟ್ಟುಕೊಂಡೇ ಹುಟ್ಟುತ್ತದೆ. ಒಂದು ಕಡೆಯಿಂದ ಅಭಿವೃದ್ಧಿ ಇಲ್ಲ ಇನ್ನೊಂದೆಡೆ ಸರ್ಕಾರ ಸಾಲದ ಸುಳಿಯಲ್ಲಿದೆ. ಸರ್ಕಾರ ದಿವಾಳಿಯ ಅಂಚಿಗೆ ತಲುಪಲಿದೆ ಎಂದರು. ಗ್ಯಾರಂಟಿಗಳಿಂದಾಗಿ ದುಡ್ಡು ಹೊಂದಿಸುಲು ಹೋಗಿ ಎಲ್ಲ ಇಲಾಖೆ ಸೊರಗಿ ಹೋಗುವಂತಾಗಿವೆ. ಗುರುನಾರಾಯಣ ನಿಗಮದ ಬಗ್ಗೆ ಕಾಂಗ್ರೆಸ್‌ನವರು ಅಪಪ್ರಚಾರ ನಡೆಸಿದ್ದರು. ಆದರೆ ಈ ಸರ್ಕಾರ ಈ ವಷರ್ ಕೇವಲ 1 ಲಕ್ಷ ಮಾತ್ರ ಇಟ್ಟಿರುವುದನ್ನು ಕಾಂಗ್ರೆಸ್ ಅವರು ಮಾತನಾಡುವುದೇ ಇಲ್ಲ. ಇನ್ನುಳಿದ ಯಾವುದೇ ನಿಗಮಗಳಿಗೆ ಇಟ್ಟ ಹಣ ಮೂರು ಅಂಕಿ ದಾಟಿಲ್ಲ.
ಧರ್ಮದ ಆಧಾರದ ಮೇಲೆ ಮೀಸಲಾತಿ ತರಬಾರದು ಎಂಬುದು ಡಾ.ಅಂಬೇಡ್ಕರ್ ಆಶಯವಾಗಿತ್ತು. ಈ ರೀತಿಯ ಮೀಸಲಾತಿ ದೇಶ ಒಡೆಯಲು ಕಾರಣವಾಗುತ್ತದೆ. ಸಿದ್ದರಾಮಯ್ಯ ಸರ್ಕಾರ ತುಷ್ಟೀಕರಣದ ಪರಾಕಾಷ್ಠೆಗೆ ತಲುಪಿದೆ. ಅಲ್ಲದೆ ಇದು ಕಾಂಗ್ರೆಸ್‌ನ ಮಾನಸಿಕತೆ ತೋರಿಸುತ್ತದೆ. ಸಂವಿಧಾನ ವಿರೋಧಿಯಾದರೂ ಪರವಾಗಿಲ್ಲ. ನಾವು ಅದನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೋರ್ಟಿನ ತೀರ್ಪು ಏನೇ ಬರಲಿ ನಾವು ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ಮಾನಸಿಕತೆ ತೋರಿಸಿದ್ದಾರೆ.
ಒಂದು ಸಮುದಾಯ ತುಷ್ಟೀಕರಿಸುವುದಕ್ಕೆ ಮುಸಲ್ಮಾನರ ದಲಾಲ್ ಆಗಿ ಕೆಲಸ ಮಾಡುತ್ತಿರುವವರು ಕಾಂಗ್ರೆಸ್‌ನವರೇ ಹೀಗಾಗಿ ಇದು ಹಲಾಲ್ ಮತ್ತು ದಲಾಲ್ ಬಜೆಟ್ ಆಗಿದೆ. ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. 2 ಬಿಯಲ್ಲಿ ಬರುವುದು ಕೇವಲ ಮುಸಲ್ಮಾನರು ಮಾತ್ರ. ಈ ಮೀಸಲಾತಿ ಬೇರೆಯವರಿಗೆ ಸಿಗುವುದಿಲ್ಲ ಇದನ್ನು ಬಿಜೆಪಿ ವಿರೋಧಿಸುತ್ತದೆ. ಬೆಳ್ತಂಗಡಿಯಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದ ಗುತ್ತಿಗೆದಾರರೇ ಇರುವುದು ಗಮನಿಸಬೇಕಾದ ವಿಚಾರ. ಮುಂದಿನ ದಿನಗಳಲ್ಲಿ ಶೇ.100 ಮೀಸಲಾತಿ ಅವರಿಗೇ ಕೊಡಿ ಎಂದು ಹೇಳುವ ಸ್ಥಿತಿಗೆ ಕಾಂಗ್ರೆಸ್ ಬಂದರು ಅಚ್ಚರಿಯಿಲ್ಲ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲ್, ಜಿಲ್ಲಾ ರೈತ ಮೋರ್ಚಾ ಉಪಾಧಕ್ಷ ಗಣೇಶ್ ನಾವೂರು, ಚೆನ್ನಕೇಶವರ ಉಪಸ್ಥಿತರಿದ್ದರು.