ಓಲೈಕೆಗಾಗಿ ಸಂವಿಧಾನ ಬದಲಾಯಿಸುವ ಯತ್ನ - ಭಾರತಿ ಶೆಟ್ಟಿ ಆರೋಪ - ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಪ್ರತಿಭಟನೆ

oplus_2
oplus_2
Published on

ಪುತ್ತೂರು: ಭಾರತ ದೇಶದ ಭೂಪಟ ಬದಲಾಯಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಧರ್ಮಗಳು, ಜಾತಿ ಮಧ್ಯೆ ಕಲಹಗಳಿಗೆ ಬೆಂಬಲ ಮಾಡಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ. ಅಖಂಡ ಭಾರತ ಕನಸು ಒಡೆದು, ಜಾತಿಗಳನ್ನು ಒಡೆಯುವ ಕೆಲಸ ನಿರಂತರವಾಗಿ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ, ಕಟ್ಟಕಡೆಯ ವ್ಯಕ್ತಿಯ ಪ್ರಗತಿಗಾಗಿ ಸಂವಿಧಾನ ರೂಪುಗೊಂಡಿದೆ. ಆದರೆ ಕಾಂಗ್ರೆಸ್ ಓಟ್‌ಬ್ಯಾಂಕ್‌ಗಾಗಿ, ಒಂದು ಧರ್ಮದ ಓಲೈಕೆಗಾಗಿ ಬದಲಾವಣೆ ಮಾಡಲೂ ಹಿಂಜರಿಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.

ಪುತ್ತೂರು ಬಿಜೆಪಿ ವತಿಯಿಂದ ದರ್ಬೆ ವೃತ್ತದ ಬಳಿ ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹೆಂಚು ತೆಗೆಯುವಾಗ ಕೇಸರಿ ಶಾಲು ಹಾಕುವುದು ಮಾತ್ರ ಹಿಂದುತ್ವವಲ್ಲ. ಕೇಸರಿ, ಹಿಂದುತ್ವ ಹೃದಯದಲ್ಲಿ ಇರಬೇಕು. ಡಾ. ಅಂಬೇಡ್ಕರ್ ಸಾಯುವಾಗ ಮೂರಡಿ ಜಾಗ ಕೊಡದವರು ಕಾಂಗ್ರೆಸಿನವರು. ಸರ್ಕಾರ ನೀವು ನಡೆಸುತ್ತಿಲ್ಲ, ಅಲ್ಪಸಂಖ್ಯಾತರು ನಡೆಸುತ್ತಿದ್ದಾರೆ. ಲವ್ ಜಿಹಾದ್ ಸೇರಿದಂತೆ ನಿರಂತರವಾಗಿ ಅನ್ಯಾಯ ಆಗುತ್ತಿರುವುದು ಹಿಂದು ಹೆಣ್ಣುಮಕ್ಕಳಿಗೆ. ಆದರೆ ಅನ್ಯಾಯ ಆಗದ ಮುಸ್ಲಿಂ ಮಹಿಳೆಯರಿಗೆ ಆತ್ಮರಕ್ಷಣೆಯ ತರಬೇತಿ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ಕಾಂಗ್ರೆಸ್ ೫ ಬಿಟ್ಟಿ ಗ್ಯಾರಂಟಿ ಮೂಲಕ ಹಿಂದುಗಳಿಗೆ ವಂಚನೆ ಮಾಡುತ್ತಿದೆ. ದೇಶ ರಕ್ಷಕರನ್ನು ಹುಟ್ಟುಹಾಕುವ ಅರೆಸ್ಸೆಸ್ ವಿರುದ್ಧ ನಿರಂತರ ದೂರುತ್ತಾರೆ. ಆದರೆ ನಿರಂತರ ಗಲಭೆಗಳನ್ನು ಉಂಟು ಮಾಡುವವರಿಗೆ, ಪಾಕಿಸ್ತಾನ ಜಿಂದಾಬಾದ್ ಕೂಗಿದವರಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಲೇ ಬಂದಿದೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಗೆ ಇವರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಪ್ರಮುಖರಾದ ಬೂಡಿಯಾರು ರಾಧಾಕೃಷ್ಣ ರೈ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು, ನಾಗೇಶ್ ಕೆಮ್ಮಾಯಿ, ದೀಕ್ಷಾ ಪೈ, ಗೌರಿ ಬನ್ನೂರು, ಸ್ವರ್ಣಲತಾ ಹೆಗ್ಡೆ, ಯಶಸ್ವಿನಿ ಶಾಸ್ತ್ರಿ, ನಾಗೇಶ್ ಪ್ರಭು, ವಿದ್ಯಾಧರ ಜೈನ್, ನಾರಾಯಣ ಪ್ರಕಾಶ್, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ಮುರಳಿಕೃಷ್ಣ ಹಸಂತಡ್ಕ, ಹರೀಶ್ ಬಿಜತ್ರೆ, ಲಕ್ಷ್ಮಣ ಕೋಡಿಂಬಾಡಿ, ಅನಿಲ್ ತೆಂಕಿಲ, ಮಹೇಶ್ ಕೇರಿ, ಸುನೀಲ್ ದಡ್ಡು, ಶಶಿಕುಮಾರ್ ಬಾಲ್ಯೊಟ್ಟು, ವಸಂತಲಕ್ಷ್ಮಿ, ರಾಮಚಂದ್ರ ಕಾಮತ್ ಮತ್ತಿತರರು ಇದ್ದರು.

ಪ್ರತಿಕೃತಿ ದಹನ ವೇಳೆ ಜಟಾಪಟಿ

ಪ್ರತಿಭಟನೆಯ ಕೊನೆಯಲ್ಲಿ ಡಿ. ಕೆ. ಶಿವಕುಮಾರ್ ಪ್ರತಿಕೃತಿ ದಹನಕ್ಕೆ ಪ್ರತಿಭಟನಾಕಾರರು ಮುಂದಾಗಿದ್ದಾರೆ. ಕಾರಿನ ಡಿಕ್ಕಿಯಲ್ಲಿದ್ದ ಪ್ರತಿಕೃತಿ ತೆಗೆಯುವಾಗ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಕಾರ್ಯಕರ್ತರು ‘ನಮಗೆ ಯಾವುದೇ, ಯಾರದೇ ಅನುಮತಿ ಬೇಕಾಗಿಲ್ಲ ಎಂದು ಪೊಲೀಸರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದಾಗ ಜಟಾಪಟಿ ನಡೆಯಿತು. ರಸ್ತೆ ಮಧ್ಯಕ್ಕೆ ಪ್ರತಿಕೃತಿಯನ್ನು ಎಳೆದು ತಂದು ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದರು. ಮಠಂದೂರು ಮತ್ತು ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದಿದೆ ಎಂಬ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇಲಾಖೆಯ ಹಿರಿಯ ಅಽಕಾರಿಗಳು ಪ್ರತಿಕೃತಿ ದಹಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಯತ್ನವಾಗಿದೆಯೇ ಹೊರತು ಹೊಕೈ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net