

ಕುಂಬಳೆ: ಗ್ರಾ.ಪಂ.ನ ಮಾಜಿ ಲೆಕ್ಕಪರಿಶೋಧಕ ರಮೇಶ್ ಎಂ ಮಾಡಿರುವ ಹಣಕಾಸು ಅವ್ಯವಹಾರದ ಕುರಿತು ಸಮಗ್ರ ತನಿಖೆ ನಡೆಸುವಂತೆ ಗ್ರಾ.ಪಂ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಅವರು ಒತ್ತಾಯಿಸಿದ್ದಾರೆ. ಬುಧವಾರ ಸಂಜೆ ಸುದ್ದಿಗೋಷ್ಠಿ ನಡೆಸಿ, ಗುರುವಾರ ಮಧ್ಯಾಹ್ನ ತುರ್ತು ವ್ಯವಸ್ಥಾಪನಾ ಸಮಿತಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
2023ರ ಸೆಪ್ಟೆಂಬರ್‌ನಿಂದ 2024ರವರೆಗಿನ ಪಂಚಾಯಿತಿಯಲ್ಲಿ ನಡೆದಿರುವ ಕಾರ್ಯಚಟುವಟಿಕೆಗಳು ಮತ್ತು ವಹಿವಾಟುಗಳನ್ನು ಪರಿಶೀಲಿಸಿದ ನಂತರ ಕುಂಬಳೆ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ರಮೇಶ್ ಅವರನ್ನು ಮೇ 16ರಂದು ಅಮಾನತುಗೊಳಿಸಿತ್ತು. ಸ್ಥಳೀಯಾಡಳಿತ ಜಂಟಿ ನಿರ್ದೇಶಕರು ಮತ್ತು ಕುಂಬಳೆ ಪೋಲೀಸರಿಗೆ ದೂರು ನೀಡಿದ್ದು, ಜಂಟಿ ನಿರ್ದೇಶಕರ ಕಚೇರಿಯ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ 11,04,959 ರೂ. ಪಂಚಾಯತ್ ಅಧ್ಯಕ್ಷರ ಲಾಗಿನ್‌ನಲ್ಲಿ ಹಣಕಾಸಿನ ವಹಿವಾಟು ನಡೆಯಬೇಕಿದ್ದಾಗ ಸಂಬಂಧಿಕರು ಲಾಗಿನ್ ಅನ್ನು ದುರುಪಯೋಗಪಡಿಸಿಕೊಂಡು ಹಣ ದೊಚಿರುವುದು ಕಂಡುಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಇಲಾಖಾ ಸಚಿವ ಎಂ.ಬಿ.ರಾಜೇಶ್ ಅವರಿಗೂ ಶಾಸಕ ಎ.ಕೆ.ಎಂ.ಅಶ್ರಫ್ ಮೂಲಕ ದೂರು ಸಲ್ಲಿಸುವುದಾಗಿ ಅಧ್ಯಕ್ಷೆ ತಾಹಿರಾ ಯೂಸುಫ್ ತಿಳಿಸಿದರು.
ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಸಬೂರ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ರಹ್ಮಾನ್ ಆರಿಕ್ಕಾಡಿ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ನಸೀಮಾ ಖಾಲಿದ್, ಪಂಚಾಯಿತಿ ಸದಸ್ಯ ಯೂಸುಫ್ ಉಳುವಾರ್ ಉಪಸ್ಥಿತರಿದ್ದರು.