

President Macron: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ಗೆ ಅವರ ಪತ್ನಿಯಿಂದಲೇ ಆದ ಮುಖಭಂಗ ದೃಶ್ಯವೊಂದು ಇದೀಗ ಜಾಲತಾಣದಲ್ಲಿ ಭಾರೀ ಹರಿದಾಡಿದೆ. ಈ ವೈರಲ್ ದೃಶ್ಯ ನೋಡಿದ ನೆಟ್ಟಿಗರು ಒಂದು ನಿಮಿಷ ಅಚ್ಚರಿಗೆ ಒಳಗಾಗಿದ್ದು, ಮ್ಯಾಕ್ರನ್ ತಮ್ಮ ಪತ್ನಿಯಿಂದಲೇ ಇಂಥಾ ಏಟಿಗೆ ಗುರಿಯಾಗಿದ್ದೇಕೆ? ಎಂಬ ಮಾತುಗಳು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಏಷ್ಯಾ ಪ್ರವಾಸದ ಹಿನ್ನೆಲೆ ಮ್ಯಾಕ್ರನ್ ದಂಪತಿಗಳು ಭಾನುವಾರ (ಮೇ.25) ಸಂಜೆ ವಿಯೆಟ್ನಾಂ ರಾಜಧಾನಿ ಹನೋಯ್‌ಗೆ ಬಂದಿಳಿದರು. ವಿಮಾನ ನಿಲ್ದಾಣದಲ್ಲಿ, ಸಿಬ್ಬಂದಿ ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಈ ಆಘಾತಕಾರಿ ದೃಶ್ಯ ಕಂಡುಬಂದಿದೆ. ಮ್ಯಾಕ್ರನ್ ಅವರ ಮೂತಿಯನ್ನು ತಿವಿದ ಪತ್ನಿ, ತಮ್ಮ ಕೈಯಿಂದಲೇ ಅಧ್ಯಕ್ಷರನ್ನು ತಳ್ಳಿದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಘಟನೆ ನಡೆದ ಕೆಲವೇ ಸೆಕೆಂಡ್ಗಳಲ್ಲಿ ಆಘಾತವನ್ನು ಮರೆಮಾಚಿದ ಅಧ್ಯಕ್ಷರು, ಸ್ಥಳದಲ್ಲಿದ್ದವರಿಗೆ ಹಾಯ್ ಎಂದು ಕೈಬಿಸಿ ಹೇಳುತ್ತಿರುವುದೂ ವಿಡಿಯೊದಲ್ಲಿ ಕಂಡುಬಂದಿದೆ.
ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಮ್ಯಾಕ್ರನ್ ಅವರ ಪ್ರಧಾನ ಕಚೇರಿ, ಆರಂಭದಲ್ಲಿ ಇದು ನಕಲಿ ಎಂದು ಆರೋಪ ತಳ್ಳಿಹಾಕಿತ್ತು. ಆದರೆ, ನಂತರದಲ್ಲಿ ಅವು ಅಸಲಿಯೇ ಎಂದು ದೃಢಪಡಿಸಿತು,(ಏಜೆನ್ಸೀಸ್).