ಶಿಕ್ಷಕಿಯಾದ ಮುರ್ಮು.. 9 ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ!

murmu
Published on

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ನವದೆಹಲಿಯ ಶಾಲೆಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದು, ಅಲ್ಲಿನ ಮಕ್ಕಳಿಗೆ ಪಾಠ ಹೇಳಿಕೊಟ್ಟರು. ಇದು ಮಕ್ಕಳು, ಶಿಕ್ಷಕರು ಮಾತ್ರವಲ್ಲದೆ ಸಾರ್ವಜನಿಕರನ್ನೂ ಅಚ್ಚರಿಗೊಳಿಸಿತು.

ಅಧ್ಯಕ್ಷೆ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್ ನಲ್ಲಿರುವ ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯ ಶಾಲೆಗೆ ತೆರಳಿ ಪಾಠ ಮಾಡಿದರು. ಶಾಲೆಗೆ ಭೇಟಿ ನೀಡುತ್ತಿದ್ದಂತೆ ರಾಷ್ಟ್ರಪತಿ ಮುರ್ಮು ಅವರು ವಿದ್ಯಾರ್ಥಿಗಳ ಹೆಸರು ಕೇಳಿ ಅವರ ಆಸಕ್ತಿ ಮತ್ತು ಗುರಿಗಳನ್ನು ತಿಳಿದುಕೊಂಡರು. ಬಳಿಕ ಜಾಗತಿಕ ತಾಪಮಾನದ ಕುರಿತು ಪಾಠ ಮಾಡಿದರು. ವಿದ್ಯಾರ್ಥಿಗಳು ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆ ಮಾಡುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಏಕ್ ಪೇದೆ ಮಾ ಕೆ ನಾಮ್ (ತಾಯಿಯ ಹೆಸರಿನಲ್ಲಿ ಸಸಿ ನೆಡಿ)’ ಎಂದು ಕರೆ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಡಿಶಾದ ದ್ರೌಪದಿ ಮುರ್ಮು 15ನೇ ರಾಷ್ಟ್ರಪತಿಯಾಗಿ 2022ರ ಜುಲೈ 25 ರಂದು ಆಯ್ಕೆಯಾದರು. ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾದ ಮೊದಲ ಆದಿವಾಸಿ, ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1994-97 ರ ನಡುವೆ ರಾಯರಂಗಪುರದ ಶ್ರೀಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net