

ನವದೆಹಲಿ:ಪ್ರೇಮಾನಂದ ಮಹಾರಾಜ್ ( Premanand ji Maharaj health) ಅವರ ಅನಾರೋಗ್ಯದ ಸುದ್ದಿ ಕೇಳಿ ಒಬ್ಬ ಮುಸ್ಲಿಂ ವ್ಯಕ್ತಿ ತೀವ್ರ ದುಃಖಿತನಾಗಿದ್ದ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಲು ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣ ಬೆಳೆಸಿ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವ್ಯಕ್ತಿ ಯಾರು? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಈ ವಿಡಿಯೋದಲ್ಲಿ ಕಾಣುವ ವ್ಯಕ್ತಿಯ ಹೆಸರು ಸುಫಿಯಾನ್, ಇವರು ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ನಿವಾಸಿ.
ವೈರಲ್ ಆಗಿರುವ ವಿಡಿಯೋದಲ್ಲಿ, "ಇವರು ನಮ್ಮ ಪ್ರೇಮಾನಂದ ಮಹಾರಾಜ್. ನಾವು ಭಾರತದವರು. ಅವರು ಒಳ್ಳೆಯ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿರುವುದರಿಂದ ನಮಗೆ ಅವರು ಇಷ್ಟ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ನಮಗೆ ಈಗಷ್ಟೇ ತಿಳಿದು ಬಂದಿದೆ. ನಾವು ಅವರಿಗಾಗಿ ಪ್ರಾರ್ಥಿಸುತ್ತೇವೆ" ಎಂದು ಹೇಳಿದ್ದಾರೆ.
ಪ್ರೇಮಾನಂದ ಮಹಾರಾಜ್ ಅವರ ಆರೋಗ್ಯಕ್ಕಾಗಿ ಮುಸ್ಲಿಂ ವ್ಯಕ್ತಿಯ ಪ್ರಾರ್ಥನೆಯ ಬಗ್ಗೆ ಕೆಲವರು ತಮ್ಮ ಭಾವನಾತ್ಮಕವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರೆ, ಹಲವಾರು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳ ಸದಸ್ಯರು ಸುಫ್ಯಾನ್‌ಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಧಿಕೃತವಾದ ಮಾಹಿತಿಯೂ ಇಲ್ಲ. ಈ ವೀಡಿಯೊ X, Facebook ಮತ್ತು Instagram ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸಿದೆ, ಅಲ್ಲಿ ಇದನ್ನು ಸಾವಿರಾರು ಬಾರಿ ಹಂಚಿಕೊಳ್ಳಲಾಗಿದೆ. ಮುಸ್ಲಿಂ ವ್ಯಕ್ತಿಯೊಬ್ಬ ಮಾಡಿದ ಈ ಪ್ರಾರ್ಥನೆಯು ಏಕತೆ ಮತ್ತು ಮಾನವೀಯತೆಯ ಸಂಕೇತವಾಗಿದೆ.