

ಹಳೆಯಂಗಡಿ: ಭಕ್ತರು ಸಂಘಟಿತರಾಗಿ ತನು-ಮನ-ಧನದ ಸೇವೆ ನೀಡಿದಲ್ಲಿ ಶ್ರೀಕ್ಷೇತ್ರದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸಾಧ್ಯ ಎಂದು ಸಸಿಹಿತ್ಲು ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಹೇಳಿದರು.
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ 2026ನೇ ಮಾರ್ಚ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸರ್ವಭಕ್ತರ ಮಹಾಸಭೆ ಭಾನುವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಭಗವತಿ ದೇವಸ್ಥಾನದ ಆನುವಂಶಿಕ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಮಾತನಾಡಿ, ಬ್ರಹ್ಮಕಲಶೋತ್ಸವದಿಂದ ಸಾನ್ನಿಧ್ಯ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ್ ಇಡ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ವೃದ್ಧಿಯಾಗುತ್ತಿದ್ದು ಎಲ್ಲರಿಗೂ ಭಗವತಿ ದೇವಿ ಅನುಗ್ರಹ ಮಾಡಿದ್ದಾರೆ ಎಂದರು.
ಬ್ರಾಹ್ಮಣ ಸಮಾಜದ ಡಾ.ಶ್ರೀಕಾಂತ್ ರಾವ್, ಪದ್ಮಶಾಲಿ ಸಭಾದ ಉಮೇಶ್, ಬಿಲ್ಲವ ಸಮಾಜದ ದಯಾನಂದ ಗುರಿಕಾರ, ಕದಿಕೆ ಮೊಗವೀರ ಸಭಾದ ಗಿರೀಶ್ ಶ್ರೀಯಾನ್, ಲಚ್ಚಿಲ್ ಮೊಗವೀರ ಸಭಾದ ತಿಲಕ್ ಕರ್ಕೇರ, ಸಾರಂತಯ ಗರೋಡಿಯ ನಿರಂಜನ್ ಬಂಗೇರ ಹಾಗೂ ವಿವಿಧ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಕಾರ್ಯದರ್ಶಿ, ರಮೇಶ್ ಬಂಗೇರ ನಿರೂಪಿಸಿದರು.